ಜೂ. 14 ರಂದು ಬಿಜೆಪಿಯಿಂದ ’ಕರ್ನಾಟಕ ಜನಸಂವಾದ ವರ್ಚುವಲ್ ರ‍್ಯಾಲಿ’

12/06/2020

ಮಡಿಕೇರಿ ಜೂ.12 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಎರಡನೇ ಅವಧಿಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ’ ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಜೂ.14ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಡಿಕೇರಿ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಕಾಂಗೀರ ಸತೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸರಕಾರದ ಒಂದು ವರ್ಷದ ಸಾಧನೆಯನ್ನು ರಾಜ್ಯದ ಜನತೆಗೆ ವಿವರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಅಂದು ಸಂಜೆ 6ಗಂಟೆಗೆ ‘ಕರ್ನಾಟಕ ಜನಸಂವಾದ ವರ್ಚುವಲ್ ರ್ಯಾಲಿ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಯೂಟ್ಯೂಬ್ ಸೇರಿದಂತೆ ವೆಬೆಕ್ಸ್ ಸ್ಥಳೀಯ ಮಾಧ್ಯಮ ಮೂಲಕ ರಾಜ್ಯದ 20 ಲಕ್ಷಕ್ಕೂ ಅಧಿಕ ಮಂದಿಗೆ ತಲುಪಿಸಲಾಗುತ್ತದೆ. ಈ ಸಂದರ್ಭ ಮೋದಿ ಸರಕಾರದ ಸಾಧನೆಗಳು ಮತ್ತು ಸದ್ಯದ ಸ್ಥಿತಿಯಲ್ಲಿ ಕೋವಿಡ್-19 ವೈರಾಣು ವಿರುದ್ಧ ನಾಗರಿಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾಹಿತಿ ನೀಡಲಿದ್ದಾರೆ ಎಂದರು.
2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವ ಎನ್‍ಡಿಎ ಆ ಐದು ವರ್ಷಗಳಲ್ಲಿ ಮಾಡಿದ ಜನಪರ, ರೈತಪರ ಕೆಲಸಗಳು, ದೇಶದ ರಕ್ಷಣೆ ದೃಷ್ಟಿಯಿಂದ ಕೈಗೊಂಡ ದಿಟ್ಟ ನಿರ್ಧಾರಗಳು 2019ರಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನೆರವಾಯಿತು. ಈ ಅವಧಿಯ ಮೊದಲ ವರ್ಷದಲ್ಲೇ ಮೋದಿ ಅವರು ಕೈಗೊಂಡ ಐತಿಹಾಸಿಕ ನಿರ್ಧಾರಗಳು ಇಂದು ಪ್ರಪಂಚವೇ ಭಾರತದ ಕಡೆ ಆಶಾಭಾವನೆಯಿಂದ ನೋಡುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೋನಾ ಲಾಕ್ ಡೌನ್ ಅವಧಿಯ ನಡುವೆಯೇ ಮೋದಿ ಸರ್ಕಾರ ತನ್ನ ದ್ವಿತೀಯ ಅವಧಿಯ ಒಂದು ವರ್ಷವನ್ನು ಪೂರೈಸಿದೆ. ಈ ಅವಧಿಯಲ್ಲಿ ಕೇಂದ್ರ ಕೈಗೊಂಡಿರುವ ಹಲವಾರು ಯೋಜನೆಗಳ ಬಗ್ಗೆ ಮಡಿಕೇರಿ ಮಂಡಲದ 118 ಬೂತ್‍ಗಳ ಮಟ್ಟದಲ್ಲಿ ಪಕ್ಷದ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ಆರ್ಟಿಕಲ್ 370 ರದ್ಧತಿ, ಪೌರತ್ವ ತಿದ್ದುಪಡಿ ವಿಧೇಯಕ, ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಹಲವು ಮಹತ್ತರ ಮತ್ತು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ 1 ಕೊಟಿಗೂ ಅಧಿಕ ಫಲಾನುಭವಿಗಳಿಗೆ ಚಿಕಿತ್ಸೆ, ಅಟಲ್ ಪೆನ್ಶನ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಂತಾದ ಯೋಜನೆಗಳ ವೃದ್ಧರಿಗೆ ರೈತರಿಗೆ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ನುಡಿದರು.
ದೇಶವನ್ನು ಸ್ವಾವಲಂಬಿಯಾಗಿ ಮಾಡುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆತ್ಮ ನಿರ್ಭರ ಭಾರತದ ಕನಸನ್ನು ಕಂಡಿದ್ದು, ಆ ನಿಟ್ಟಿನಲ್ಲಿ ಗರೀಬಿ ಕಲ್ಯಾಣ ಯೋಜನೆಯಡಿ 80 ಕೋಟಿ ಫಲಾನುಭವಿಗಳಿಗೆ 1.70 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದು, ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯ ವಿತರಿಸುವ ಗುರಿ ಹೊಂದಲಾಗಿದೆ. ನರೇಗ ಯೋಜನೆಯಡಿ ನೀಡುತ್ತಿದ್ದ ವೇತನವನ್ನು 182 ರೂ.ಗಳಿಮದ 202 ರೂ.ಗಳಿಗೆ ಏರಿಸಲಾಗಿದ್ದು, 13.62 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. 3 ಕೋಟಿ ಬಡ ಹಿರಿಯ ನಾಗರಿಕರು, ವಿಧವೆಯರು. ವಿಕಲಚೇತನರಿಗೆ ತಲಾ 1000 ರೂ.ಗಳ ವಿಶೇಷ ನೆರವನ್ನು ನೀಡಲಾಗಿದ್ದು, 8.70 ಕೋಟಿ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ 2 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.
ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಾರಂಭದಲ್ಲಿ ಇದ್ದ ಕೇವಲ ಒಂದು ಪ್ರಯೋಗಾಲಯವನ್ನು ಇದೀಗ 610ಕ್ಕೆ ಏರಿಸಲಾಗಿದೆ. ಪ್ರಧಾನಿ ಅವರ ದಿಟ್ಟ ನಿರ್ಧಾರದಿಂದ ಕೊರೋನಾ ವೈರಸ್ ಮೇ 26ರವರೆಗೆ ಅತಿ ಕಡಿಮೆ ಅಂದರೆ ಸಾವಿನ ಪ್ರಮಾಣ ಶೇ.2.8ರಷ್ಟಿದ್ದು ಇದು ವಿಶ್ವದಲ್ಲಿಯೇ ಅತೀ ಕಡಿಮೆಯಾಗಿದೆ. ಆರೋಗ್ಯ ಸೇತು ಆಪ್ ಮೂಲಕ ಕೊರೋನಾದ ಮಾಹಿತಿ ವಿನಿಮಯ, ಮೇ28ರವರೆಗೆ 2 ಲಕ್ಷಕ್ಕೂ ಅಧಿಕ ವಲಸಿಗರು ಮತ್ತು ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಲು 384 ಶ್ರಮಿಕ ರೈಲುಗಳ ನಿಯೋಜನೆ ಪಿ.ಪಿ.ಇ ಕಿಟ್ ಹಾಗೂ ಎನ್95 ಮಾಸ್ಕ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಪ್ರಮುಖ ಸಾಧನೆಗಳಾಗಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ, ಪ್ರಚಾರ ಸಂಯೋಜಕ ಎ.ಧನಂಜಯ ಹಾಗೂ ಮನು ಮಹೇಶ್ ಉಪಸ್ಥಿತರಿದ್ದರು.