ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡಲು ಒತ್ತಾಯ

ಮಡಿಕೇರಿ ಜೂ.12 : ಸತ್ತವರಿಗೆ ಪಿಂಡ ಪ್ರದಾನ ಮಾಡುವುದು ಕೊಡವ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದ್ದು, ಕೊರೊನಾ ಲಾಕ್ ಡೌನ್ ಸಡಿಲಗೊಂಡಿದ್ದರು ಈ ಕ್ರಿಯೆಗೆ ಭಾಗಮಂಡಲದಲ್ಲಿ ಅವಕಾಶ ನೀಡದಿರುವುದು ಕೊಡವರ ಧಾರ್ಮಿಕ ಹಕ್ಕಿಗೆ ಚ್ಯುತಿ ತಂದಂತಾಗಿದೆ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರು, ಕೊಡವ ಜನಾಂಗದಲ್ಲಿ ಕುಟುಂಬದ ವ್ಯಕ್ತಿಯೊಬ್ಬರು ಮೃತ ಪಟ್ಟಾಗ ಅವರ ತಿಥಿ ಕರ್ಮಾಂತರಗಳು ಮುಗಿದ ಬಳಿಕ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುವುದು ಪ್ರಮುಖ ಧಾರ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಮೋಕ್ಷ ದೊರೆತು ಆತ ಕುಟುಂಬದ ಮೂಲ ಪುರುಷರ(ಕಾರೋಣ) ಪಟ್ಟಿಗೆ ಸೇರುತ್ತಾರೆ ಎನ್ನುವ ನಂಬಿಕೆ ಕೊಡವರದ್ದಾಗಿದೆ ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ನಿಧನರಾದ 16 ರಿಂದ 180 ದಿನಗಳ ಒಳಗೆ ಈ ಕಾರ್ಯ ವಿಧಿವತ್ತಾಗಿ ನಡೆಯಬೇಕಾಗಿದೆ. ಈ ಕ್ರಿಯೆ ನಡೆಯುವವರೆಗೆ ಕುಟುಂಬದ ಸದಸ್ಯರು ಕಠಿಣ ವ್ರತವನ್ನು ಪಾಲಿಸಬೇಕಾಗಿರುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪಿಂಡ ಪ್ರದಾನದಂತಹ ಧಾರ್ಮಿಕ ಕ್ರಿಯೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಹಜವಾಗಿ ನಡೆಯಬೇಕಾಗಿರುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಎಲ್ಲಾ ಚಟುವಟಿಕೆಗಳು ಸ್ತಬ್ಧ ಗೊಂಡಂತೆ ಎಲ್ಲಾ ಧಾರ್ಮಿಕ ಕ್ರಿಯಾದಿಗಳು ಸ್ಥಗಿತವಾಗಿರುವುದು ಸಹಜ ಹಾಗೂ ಸಹನೀಯವಾಗಿದೆ. ಆದರೆ, ಜೂ.8 ರಿಂದ ಲಾಕ್ ಡೌನ್ ಸಡಿಲಗೊಂಡು ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಲಾಗಿದ್ದರು ಪಿಂಡ ಪ್ರದಾನಕ್ಕೆ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಷರತ್ತಿಗೆ ಒಳಪಟ್ಟು ಧಾರ್ಮಿಕ ಕೇಂದ್ರಗಳು ಹೊಟೇಲ್, ರೆಸಾರ್ಟ್, ಅಂಗಡಿ ಮುಂಗಟ್ಟುಗಳು, ಹೋಂ ಸ್ಟೇಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಪಿಂಡ ಪ್ರದಾನಕ್ಕೆ ಮಾತ್ರ ಅವಕಾಶ ನೀಡದಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದ ಪೂವಯ್ಯ, ಈ ಕ್ರಿಯೆಯ ಮಹತ್ವದ ಬಗ್ಗೆ ತಲಕಾವೇರಿ ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದರು.
ಈ ಸಂದರ್ಭವನ್ನು ಬಳಸಿಕೊಂಡು ಕೆಲವರು ಅರ್ಚಕರ ಮನೆಯಲ್ಲಿ ಪಿಂಡ ಪ್ರದಾನದ ಕ್ರಿಯೆಗಳನ್ನು ಮುಗಿಸಿ ಕಾವೇರಿಯಲ್ಲಿ ಪಿಂಡವನ್ನು ಬಿಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಕದ್ದು ಮುಚ್ಚಿ ಇಂತಹ ಕ್ರಿಯೆಗಳನ್ನು ನಡೆಸುವುದರ ಬದಲು ಜಿಲ್ಲಾಡಳಿತ ಕೆಲವು ನಿರ್ಬಂಧಗಳೊಂದಿಗೆ ಮುಕ್ತವಾಗಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಹಲವು ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಸೆಳೆದಿದ್ದರು ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು, ಈಗಲಾದರು ಜಿಲ್ಲಾಧಿಕಾರಿಗಳು ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ಕೊಕ್ಕಲೇರ ಎ.ಕಾರ್ಯಪ್ಪ ಮಾತನಾಡಿ, ಪಿಂಡ ಪ್ರದಾನ ಕೊಡವ ಸಂಸ್ಕøತಿಯಲ್ಲಿ ಮಹತ್ವದ ಕ್ರಿಯೆಯಾಗಿದೆ. ವಿವಾಹಕ್ಕಿರುವ ಮಹತ್ವಕ್ಕಿಂತಲೂ ಈ ಕ್ರಿಯೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಕುಟುಂಬದ ಸದಸ್ಯರು ಕಟ್ಟುನಿಟ್ಟಿನ ವ್ರತಾಚರಣೆಯ ಮೂಲಕ ನಡೆಸಲಾಗುವ ಈ ಕ್ರಿಯೆಗೆ ನಿರ್ಬಂಧ ವಿಧಿಸುವುದು ಸರಿಯಲ್ಲವೆಂದರು.
ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಪ್ರಮುಖರಾದ ಮಣವಟ್ಟೀರ ದೊರೆ ಸೋಮಣ್ಣ ಹಾಗೂ ಮಣವಟ್ಟೀರ ಪಾಪು ಚಂಗಪ್ಪ ಉಪಸ್ಥಿತರಿದ್ದರು.
