ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಹೋಂಸ್ಟೇ ಅಸೋಸಿಯೇಷನ್ ಒತ್ತಾಯ

12/06/2020

ಮಡಿಕೇರಿ ಜೂ. 12 : ಜಿಲ್ಲಾಡಳಿತದ ಅಣತಿಯಂತೆ ಪ್ರವಾಸೋದ್ಯಮ ಇಲಾಖೆಯು ಅನಧಿಕೃತ ಹೋಂಸ್ಟೇ ವಿರುದ್ಧ ದಾಳಿ ನಡೆಸಿರುವುದನ್ನು ಕೊಡಗು ಹೋಂಸ್ಟೇ ಅಸೋಸಿಯೇಶನ್ ಸ್ವಾಗತಿಸುತ್ತದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ.ಅನಂತಶಯನ ತಿಳಿಸಿದ್ದಾರೆ.
ನಗರದ ರಾಜಾಸೀಟ್ ಸುತ್ತಮುತ್ತಲ ಪ್ರದೇಶ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನಧಿಕೃತ ಹೋಂಸ್ಟೇಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಈ ರೀತಿಯ ಎಲ್ಲಾ ಹೋಂಸ್ಟೇಗಳ ವಿರುದ್ಧ ಮತ್ತು ಕೊರೋನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಹೋಂಸ್ಟೇಗಳ ವಿರುದ್ಧವೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
::: ಹೋಂಸ್ಟೇಗಳ ಮೇಲೆ ದಾಳಿ :::
ಕೊರೋನಾ ಲಾಕ್ ಡೌನ್ ಸಡಿಲಿಕೆ ಇದ್ದರೂ ಕೊಡಗು ಜಿಲ್ಲೆಯಲ್ಲಿ ಅಧಿಕೃತ ಹೋಂಸ್ಟೇಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಅನಧಿಕೃತ ಹೋಂಸ್ಟೇಗಳು ಬಾಗಿಲು ತೆರೆದುಕೊಂಡಿರುವ ಕುರಿತು ದೂರು ಕೇಳಿ ಬಂದ ಹಿನ್ನೆಲೆ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಇಂದು ದಾಳಿ ನಡೆಸಿದರು. ಮಡಿಕೇರಿಯ ಚಾಮುಂಡೇಶ್ವರಿ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಹೋಂಸ್ಟೇಗೆ ದಾಳಿ ಮಾಡಿದ ಅಧಿಕಾರಿಗಳು ಕಠಿಣ ಕ್ರಮದ ಎಚ್ಚರಿಕೆ ನೀಡಿ ಬೀಗ ಜಡಿದರು.