ಮಳೆಹಾನಿ ಸಂತ್ರಸ್ತರಿಗೆ ಮನೆ ಸೇರುವ ಸಂಭ್ರಮ : ಕುಮಾರಸ್ವಾಮಿ ಲೇಔಟ್ ಹೆಸರಿಡುವ ಅಭಿಲಾಷೆ

June 12, 2020

ಮಡಿಕೇರಿ ಜೂ.12 : ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಮಹಾಮಳೆ ಸೃಷ್ಟಿಸಿದ ದುರಂತದಿಂದ ಬದುಕಿ ಬಾಳಿದ್ದ ಮನೆಗಳನ್ನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಹಲವು ಕುಟುಂಬಗಳು ಇಂದು ಸರ್ಕಾರ ನಿರ್ಮಿಸಿಕೊಟ್ಟ ನೂತನ ಮನೆಗಳ “ಗೃಹ ಪ್ರವೇಶ” ಸಮಾರಂಭದ ಸಂಭ್ರಮದಲ್ಲಿವೆ. ಮದೆನಾಡಿನ ಗೋಳಿಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಸುಮಾರು 80 ಮನೆಗಳಿಗೆ ಅರ್ಹ ಫಲಾನುಭವಿಗಳು ಬಂದು ಸೇರುತ್ತಿದ್ದು, ಬಡಾವಣೆಗೆ ಹೆಚ್.ಡಿ.ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಸಮೀಪದ ಗೋಳಿಕಟ್ಟೆಯಲ್ಲಿ 9.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 80 ಮನೆಗಳನ್ನು ಇದೇ ಜೂ.4 ರಂದು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ತಮಗೆ ದೊರೆತ ಮನೆಗಳಿಗೆ ಕೆಲ ಮಂದಿ ತಕ್ಷಣವೆ ಬಂದು ಸೇರಿದ್ದರೆ, ಮತ್ತೆ ಹಲವರು ಲಾಕ್ ಡೌನ್ ನಡುವೆ ಸೀಮಿತ ಬಂಧು ಮಿತ್ರರೊಂದಿಗೆ ಗೃಹ ಪ್ರವೇಶ ಮಾಡಿ, ಸುಂದರ ಬದುಕಿನ ನಿರೀಕ್ಷೆಗಳನ್ನು ಎದೆಯಲ್ಲಿ ತುಂಬಿಕೊಂಡಿದ್ದಾರೆ.
ಶುಕ್ರವಾರ ಗೋಳಿಕಟ್ಟೆಯ ಸಂತ್ರಸ್ತರ ಮನೆಗಳ ನೂತನ ಬಡಾವಣೆಯಲ್ಲಿ ಮೂರು ಮನೆಗಳ ಗೃಹ ಪ್ರವೇಶ ಸರಳವಾಗಿ ನಡೆಯಿತು. ಪತ್ರಿಕಾ ಛಾಯಾಗ್ರಾಹಕ ಕೆ.ಎಸ್.ಲೋಕೇಶ್ ಅವರು ಕೂಡ ತಮ್ಮ ಬಂಧು, ಮಿತ್ರರ ಶುಭಕಾಮನೆಗಳೊಂದಿಗೆ ಗೃಹಪ್ರವೇಶ ಮಾಡಿ ತೃಪ್ತಿಯ ನಗು ಬೀರಿದರು. ಎರಡು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ತಾವಿದ್ದ ಕಾಟಕೇರಿಯ ಮನೆಯನ್ನು ಅವರು ಕಳೆದುಕೊಂಡಿದ್ದರು.
::: ಮುಂಗಾರಿಗೆ ಸಿದ್ಧತೆ :::
ಹೊಸ ಬಡಾವಣೆಯ ಕೆಲವು ಮನೆಗಳಿಗೆ ಅದಾಗಲೆ ಸೇರಿರುವ ಕುಟುಂಬಗಳು, ತಮಗೆ ಲಭ್ಯವಿರುವ ಜಾಗದಲ್ಲಿ ಕಟ್ಟಿಗೆ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಇರಿಸಲು ಶೀಟ್‍ಗಳನ್ನು, ಹೆಂಚುಗಳನ್ನು ಬಳಸಿ ಶೆಡ್ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಕೋಣೆ ಮತ್ತು ಕಾಂಪೌಂಡ್ ನಿರ್ಮಿಸಿಕೊಳ್ಳುವ ಕಾರ್ಯವೂ ನಡೆಯುತ್ತಿದೆ.
::: ಕೆಲಸದ ಚಿಂತೆ :::
ಮದೆನಾಡಿನ ಮುಖ್ಯ ರಸ್ತೆಯಿಂದ ಅಂದಾಜು 3 ಕಿ.ಮೀ. ಒಳಭಾಗದಲ್ಲಿರುವ ವಸತಿ ಸಮುಚ್ಛಯ ಪ್ರದೇಶದ ಸುತ್ತಮುತ್ತಲು ತಮಗೆ ಅಗತ್ಯ ಕೆಲಸ ದೊರಕಬಹುದೇ ಎನ್ನುವ ಬಗ್ಗೆಯೂ ಹಲವು ಕಾರ್ಮಿಕ ಕುಟುಂಬಗಳು ಚಿಂತನೆಯಲ್ಲಿ ತೊಡಗಿವೆ. ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಗಳ ನಡುವೆ ಹೊಸ ಪ್ರದೇಶದ ಸುತ್ತಮುತ್ತ ಕೆಲಸ ದೊರಕಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಾಫಿ, ಭತ್ತದ ಗದ್ದೆಗಳನ್ನು ಒಳಗೊಂಡ ಪರಿಸರದ ನಡುವೆ ವಸತಿ ಸಮುಚ್ಛಯ ಇರುವುದರಿಂದ ಒಂದಷ್ಟು ಕೆಲಸ ದೊರಕುವ ವಿಶ್ವಾಸವು ಇದೆ.
::: ಕುಮಾರಸ್ವಾಮಿ ಲೇಔಟ್ :::
2018 ರಲ್ಲಿ ಸಂಭವಿಸಿದ ಮಳೆ ಅನಾಹುತಕ್ಕೆ 800 ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾದಾಗ ಸಕಾಲದಲ್ಲಿ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಷ್ಟೇ ಸಂಖ್ಯೆಯ ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಕಾಮಗಾರಿಗೆ ಚಾಲನೆಯನ್ನು ನೀಡಿದರು. ತಲಾ 9.80 ಲಕ್ಷ ರೂ.ಗಳಲ್ಲಿ ನೂತನ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ವಿಶಾಲ ರಸ್ತೆ, ಪಾರ್ಕ್ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.
ಇದು ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿರುವುದರಿಂದ ಈ ಬಡಾವಣೆಗೆ “ಹೆಚ್.ಡಿ.ಕುಮಾರಸ್ವಾಮಿ ಲೇಔಟ್” ಎಂದು ಹೆಸರಿಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಲು ಬಹುತೇಕರು ನಿಶ್ಚಯಿಸಿರುವುದಾಗಿ ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

error: Content is protected !!