ಆಡಳಿತಾಧಿಕಾರಿ ನೇಮಕ : ಗ್ರಾ.ಪಂ ಹಕ್ಕೊತ್ತಾಯ ಆಂದೋಲನ ಸಮಿತಿ ವಿರೋಧ

ಮಡಿಕೇರಿ ಜೂ.13 : ರಾಜ್ಯದ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ ತಕ್ಷಣ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಮಿತಿ ಒತ್ತಾಯಿಸಿದೆ.
ಮಡಿಕೇರಿಯಲ್ಲಿ ಜಿ.ಪಂ ಉಪ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಸಮಿತಿಯ ಪ್ರಮುಖರು ಕೊರೋನಾ ‘ಅಸಾಧಾರಣ ಪರಿಸ್ಥಿತಿ’ಯ ನೆಪವೊಡ್ಡಿ ಸ್ಥಳೀಯ ಸರ್ಕಾರದಂತ್ತಿರುವ ಗ್ರಾ.ಪಂ ಗಳನ್ನು ಅತಂತ್ರಗೊಳಿಸುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ ರಾಜ್ಯ ಚುನಾವಣಾ ಆಯೋಗ ಅವಧಿ ಮುಗಿದಿರುವ ಗಾ.ಪಂ ಗಳಿಗೆ ತಕ್ಷಣ ಚುನಾವಣೆ ನಡೆಸುವ ಕಾರ್ಯಕ್ಕೆ ಮುಂದಾಗಬೇಕು, ಅಗತ್ಯವಿರುವ ಸಹಕಾರ ಮತ್ತು ಪೂರಕ ನಿರ್ದೇಶನಗಳನ್ನು ಸರ್ಕಾರ ನೀಡಬೇಕು, ಅಲ್ಲಿಯವರೆಗೆ ಪ್ರಸ್ತುತ ಇರುವ ಸ್ಥಳೀಯ ಗ್ರಾ.ಪಂ ಸರ್ಕಾರವನ್ನೇ ಮುಂದುವರಿಸಬೇಕು, ಚುನಾವಣೆ ನಡೆಸಲು ಅಸಾಧ್ಯವಾದ ಪರಿಸ್ಥಿತಿ ಇರುವಲ್ಲಿ ಮಾತ್ರ ಹಂತ ಹಂತವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು, ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವಂತಹ ತಪ್ಪು ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಜನಾದೇಶದ ಆಡಳಿತವನ್ನು ಕೊನೆಗಾಣಿಸುವುದು ಕಾನೂನಿಗೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ. ಗ್ರಾ.ಪಂ ಗಳು ಸಭೆ ಹಾಗೂ ಹಣಕಾಸಿನ ವ್ಯವಹಾರ ನಡೆಸಬಾರದೆಂದು ಸರ್ಕಾರ ತಿಳಿಸಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಅತಂತ್ರ ಪರಿಸ್ಥಿತಿಗೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋವಿಡ್ ಪರಿಸ್ಥಿತಿ ನಿರ್ವಹಿಸಲು ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿರುವ ಚುನಾಯಿತ ಸದಸ್ಯರು ಬೇಕು. ಅದಕ್ಕಾಗಿಯೇ ಜೂ.8 ರಂದು ಇದೇ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮತ್ತು ಜವಾಬ್ದಾರಿಯನ್ನು ಉಲ್ಲೇಖಿಸಿ ಸುದೀರ್ಘ ಮಾರ್ಗದರ್ಶಿಯನ್ನು ಹೊರಡಿಸಿದೆ. ಆದರೆ ಜನಾದೇಶವಿರುವ ಸ್ಥಳೀಯ ಸರ್ಕಾರವೇ ಮುಂದುವರಿದು ಅಧಿಕಾರ ನಡೆಸುವುದು ರಾಜ್ಯ ಸರ್ಕಾರಕ್ಕೆ ಬೇಕಿಲ್ಲವೆಂದು ಯಾಕುಬ್ ಆರೋಪಿಸಿದರು.
ಸರ್ಕಾರ ತಕ್ಷಣ ತನ್ನ ತಪ್ಪು ನಿರ್ಧಾರಗಳಿಂದ ಹಿಂದೆ ಸರಿದು ಚುನಾವಣೆ ನಡೆಯುವಲ್ಲಿಯವರೆಗೆ ಹಿಂದಿನ ಚುನಾಯಿತ ಆಡಳಿತ ಮಂಡಳಿಯನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಕೆದಕಲ್ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಲಕೃಷ್ಣ, ಬಲ್ಲಮಾವಟಿ ಗ್ರಾ.ಪಂ ಅಧ್ಯಕ್ಷರಾದ ಸರಸು ಪೆಮ್ಮಯ್ಯ, ಸದಸ್ಯ ಕುಮಾರ್ ಸೋಮಣ್ಣ, ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷ ರೀಟಾಮುತ್ತಣ್ಣ, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲನ್ ನಾಯಕ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.
