ಪದಗ್ರಹಣಕ್ಕೆ ದೇವರ ಮೊರೆ ಹೋದ ಡಿಕೆಶಿ

13/06/2020

ಬೆಂಗಳೂರು ಜೂ.13 : ಕೆಪಿಸಿಸಿ ಅಧ್ಯಕ್ಷರಾದರೂ ಹೈಕಮಾಂಡ್ ಅಧ್ಯಕ್ಷಗಿರಿಗೆ ಹಸಿರು ನಿಶಾನೆ ತೋರಿಸಿದ್ದರೂ ಸಹ ಡಿ.ಕೆ.ಶಿವಕುಮಾರ್ ಗೆ ಅಧಿಕೃತವಾಗಿ ಪದಗ್ರಹಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೂರು ಬಾರಿ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾದರೂ ಸಹ ಒಂದಲ್ಲ ಒಂದು ಕಾರಣಕ್ಕಾಗಿ ಅದು ಮುಂದೂಡಲ್ಪಟ್ಟಿದೆ. ಈಗ ಜೂನ್14ರ ಕಾರ್ಯಕ್ರಮವೂ ಮುಂದೂಡಿಕೆಯಾಗಿದೆ.
ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಎದುರಾಗಿರುವ ಅಡೆತಡೆ ನಿವಾರಣೆಗೆ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಲಿದ್ದಾರೆ. ತುಮಕೂರಿನ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯನ ಸಲಹೆಯಂತೆ ಶಿವನ ದರ್ಶನ ಪಡೆಯಲು ಮುಂದಾಗಿದ್ದಾರೆ.
ಇದೇ ಭಾನುವಾರ ತಮಿಳುನಾಡಿನ ಪ್ರಸಿದ್ಧ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಶಿವಕುಮಾರ್, ಕುಟುಂಬ ಸಮೇತರಾಗಿ ವಿಘ್ನಗಳೆಲ್ಲ ನಿವಾರಣೆಯಾಗಲೀ ಎಂದು ಪ್ರಾರ್ಥಿಸಲಿದ್ದಾರೆ.