ಭಕ್ತರು ಬೇಡಿದನ್ನು ಕರುಣಿಸೋ ಕೊಡಗಿನ ವನಭದ್ರಕಾಳಿ

13/06/2020

ಸುಮಾರು ಐನೂರು ವರ್ಷಗಳ ಇತಿಹಾಸವಿರುವ ಶ್ರೀ ವನಭದ್ರಕಾಳಿ ದೇವಾಲಯವು ಕೊಡಗಿನ ಗೋಣಿಕೊಪ್ಪಲು ಸಮೀಪವಿರುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ದೇವಾಲಯವು ಹಾತೂರು- ಕೊಳತ್ತೋಡು – ಬೈಗೋಡು ಗ್ರಾಮಸ್ಥರು ಒಟ್ಟಾಗಿ ಸೇರಿ ಇಲ್ಲಿನ ದೇವಾಲಯದಲ್ಲಿ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ದೇವಾಲಯವು ಅಂದಾಜು ಸುಮಾರು 16 ಏಕರೆಯಷ್ಟು ವಿಶಾಲವಿರುವ ದೇವರಕಾಡುವಿನಲ್ಲಿ ನೆಲೆನಿಂತಿದೆ.
ವಿರಾಜಪೇಟೆ –ಮೈಸೂರು ಹೆದ್ದಾರಿಯ ಗೋಣಿಕೊಪ್ಪ ಮತ್ತು ವಿರಾಜಪೇಟೆ ನಡುವಿನ ಹಾತೂರು –ಕೊಳತ್ತೋಡು – ಬೈಗೋಡು ಗ್ರಾಮದ ಸಮೀಪದ ಹೆದ್ದಾರಿಗೆ ಹೊಂದಿಕೊಂಡಿದೆ. ದಿನನಿತ್ಯ ಈ ಮಾರ್ಗವಾಗಿ ಚಲಿಸುವ ವಾಹನವಾಗಲಿ, ಭಕ್ತಾದಿಗಳಾಗಲಿ ಒಂದು ನಿಮಿಷ ತಮ್ಮ ವಾಹನಗಳನ್ನು ಈ ದೇವಾಲಯದ ಮುಂಬಾಗದಲ್ಲಿ ನಿಲ್ಲಿಸಿ ಕಾಣಿಕೆ ಸಲ್ಲಿಸಿ, ದೇವರ ಆಶೀರ್ವಾದವನ್ನು ಪಡೆದು ತಮ್ಮ ಕಾರ್ಯಕಲಾಪಗಳೆಡೆಗೆ ಸಾಗುವುದು ಒಂದು ವಾಡಿಕೆಯಾಗಿದೆ. ಇಲ್ಲಿ ಪ್ರಾರ್ಥಿಸಿ ತೆರಳುವ ಪ್ರತಿಯೊಬ್ಬರೂ ತಮ್ಮ ಕಾರ್ಯಕಲಾಪಗಳು ಸುಗಮವಾದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಶ್ರೀ ವನಭದ್ರಕಾಳಿ ದೇವಾಲಯದ ಮಹೋತ್ಸವವು 2 ವರ್ಷಗಳೊಗೊಮ್ಮೆ ಜುಲೈ ತಿಂಗಳು ಗದ್ದೆಗೆ ಬಿತ್ತು ಹಾಕುವ ಸಂದರ್ಭದಲ್ಲೆ ನಡೆಯಲ್ಪಡುತ್ತದೆ.

ಹಿನ್ನಲೆ ಇತಿಹಾಸ : ಭತ್ತದ ಕುಯ್ಲಿನ ಸಮಯದಲ್ಲಿ ಗದ್ದೆಯ ಏರಿಯ ಬಳಿಯಲ್ಲಿ ಬಣ್ಣವಿರುವ ಪೋಳೆ (ಕೊಕ್ಕರೆ ಜಾತಿಗೆ ಸೇರಿದ ಪಕ್ಷಿ)ಯೊಂದು ಬಂದು ಕುಳಿತಿರುತ್ತದೆ. ಅಲ್ಲಿ ಕೆಲಸ ಕಾರ್ಯದಲ್ಲಿ ಮಗ್ನಳಾಗಿದ್ದ ಒಬ್ಬ ಹೆಂಗಸು ಅದನ್ನು ಕಂಡು ಅಲ್ಲಿರುವ ಜನರಿಗೆ ತಿಳಿಸುತ್ತಾಳೆ. ಆಗ ಅಲ್ಲಿನ ಜನರು ಅದನ್ನು ಹಿಡಿಯಲು ಪತ್ರಯತ್ನಿಸಿ ಬುಟ್ಟಿಯಲ್ಲಿ ಮುಚ್ಚಿಡುತ್ತಾರೆ. ನಂತರ ಅಲ್ಲಿಂದ ಅದು ಹೇಗೋ ತಪ್ಪಿಸಿಕೊಂಡು ಹಾರಿಬಂದು ಈಗ ನೆಲೆನಿಂತಿರುವ ಶ್ರೀ ವನಭದ್ರಕಾಳಿ ದೇವಾಲಯವಿರುವ ಸ್ಥಳದಲ್ಲಿ ಲೀನವಾಗುತ್ತದೆ. ಅಲ್ಲಿಂದ ಆ ಊರಿನ ಜನಗಳು ಅದನ್ನು ಕಾಳೀ ಮಾತೆಯ ಸ್ವರೂಪವೆಂದು ತಿಳಿದು ನಮ್ಮ ಕಷ್ಟ-ಕಾರ್ಯಪಣ್ಯಗಳನ್ನು ದೂರಮಾಡಿ ಊರಿನ ಉದ್ಧಾರಕ್ಕೆಂದು ಬಂದವಳೆಂದು ತಿಳಿದು ಅಲ್ಲೊಂದು ದೇವಾಲಯವನ್ನು ನಿರ್ಮಿಸುತ್ತಾರೆ. ಅದು ಇಂದಿನ ಸುಮಾರು 16 ಏಕರೆಯಷ್ಟೆರುವ ದೇವರನಾಡು ಬನದ ಶ್ರೀ ವನಭದ್ರಕಾಳಿ ದೇವಾಲಯ.

ದೇವರಕಾಡು
ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿದೆ.
ಕೊಡಗು ಜಿಲ್ಲೆಯ 4104 ಚದರ ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿದ್ಯಮಯ ಸಸ್ಯಗಳು, ಗಿಡ ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತದೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.