ನಾಟಿ ಶೈಲಿಯ ಮಟನ್ ಕರಿ ಮಾಡುವ ವಿಧಾನ

13/06/2020

ನಾನ್ ವೆಜ್ ಅಡುಗೆಗಳನ್ನು ನಾಟಿ ಶೈಲಿಯಲ್ಲಿ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ. ಇದರಲ್ಲಿ ಪುಡಿಯನ್ನು ಬಳಸುವ ಬದಲು ಕೊತ್ತಂಬರಿ ಮತ್ತು ಒಣ ಮೆಣಸನ್ನು ಹುರಿದು ಪೇಸ್ಟ್ ರೀತಿಯಲ್ಲಿ ಮಾಡಿ ನಂತರ ಸಾರನ್ನು ಮಾಡಲಾಗುವುದು. ಹೀಗೇ ಮಾಡಿದ ಸಾರಿಗೆ ಪುಡಿ ಹಾಕಿ ಮಾಡಿದ ಸಾರಿಗಿಂತ ರುಚಿ ಹೆಚ್ಚು.

ಬೇಕಾಗುವ ಸಾಮಾಗ್ರಿಗಳು : ಮಟನ್ ಒಂದು ಕೆಜಿ ಅರಿಶಿಣ ಪುಡಿ ಅರ್ಧ ಚಮಚ ಒಣ ಮೆಣಸು (ಖಾರಕ್ಕೆ ತಕ್ಕಷ್ಟು) ಕೊತ್ತಂಬರಿ ಬೀಜ 1 ಚಮಚ ಜೀರಿಗೆ 1 ಚಮಚ ಲವಂಗ 5 ಎಸಳು ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ ಕರಿಮೆಣಸಿನ ಕಾಳು 10 ಚಿಕ್ಕ ಈರುಳ್ಳಿ ಬೆಳ್ಳುಳ್ಳಿ ಎಸಳು 2 ಶುಂಠಿ ಬೆಳ್ಳುಳ್ಳಿ ಪೇಸ್ಟ್ 2-3 ಚಮಚ ಟೊಮೆಟೊ 1 ಗರಂ ಮಸಾಲ ಪುಡಿ 1 ಚಮಚ ಎಣ್ಣೆ 3 ಚಮಚ ರುಚಿಗೆ ತಕ್ಕ ಉಪ್ಪು  

ತಯಾರಿಸುವ ವಿಧಾನ: * ಮಟನ್ ತೊಳೆದು ಅದಕ್ಕೆ ಉಪ್ಪು ಮತ್ತು ಅರಿಶಿಣ ಹಾಕಿ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 4 ವಿಶಲ್ ಬರುವವರೆಗೆ ಬೇಯಿಸಿ. ನಂತರ ತಣ್ಣಗಾಗಲು ಇಡಿ. * ನಂತರ ಒಣ ಮೆಣಸು, ಜೀರಿಗೆ, ಕರಿ ಮೆಣಸಿನ ಕಾಳು, ಲವಂಗ, ಚಕ್ಕೆ ಇವುಗಳನ್ನು ಬಾಣಲೆಗೆ 1 ಚಮಚ ಎಣ್ಣೆ ಹಾಕಿ 2-3 ನಿಮಿಷ ಹುರಿಯಬೇಕು. * ಅವು ತಣ್ಣಗಾದ ಮೇಲೆ ಕತ್ತರಿಸಿದ ಚಿಕ್ಕ ಈರುಳ್ಳಿ (2-3) ಅದರ ಜೊತೆ ಹಾಕಿ 2 ಬೆಳ್ಳುಳ್ಳಿ ಎಸಳು ಹಾಕಿ ಮಿಕ್ಸಿಯಲ್ಲಿ ರುಬ್ಬಬೇಕು. * ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಉಳಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಟೊಮೆಟೊ ಹಾಕಿ ಸ್ವಲ್ಪ ಉಪ್ಪು ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ರುಬ್ಬಿದ ಪೇಸ್ಟ್ ಹಾಕಿ , ಗರಂ ಮಸಾಲ ಹಾಕಿ , ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಅನ್ನು 2-3 ಚಮಚ ಹಾಕಿ ಗ್ರೇವಿ ರೀತಿಯಲ್ಲಿ ಮಾಡಿ. ನಂತರ ಬೇಯಿಸಿದ ಮಟನ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕರಿ ರೆಡಿ.