ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದ ಬ್ರಿಜೇಶ್ ಕಾಳಪ್ಪ

14/06/2020

ಮಡಿಕೇರಿ ಜೂ.14 : ಕೊರೋನಾ ಲಾಕ್‍ಡೌನ್ ಸಡಿಲವಾದರೂ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ನಾಪೋಕ್ಲು ಬ್ಲಾಕ್‍ನ, ಚೆಯ್ಯಂಡಾಣೆ ಗ್ರಾಮದ ಕಡಂಗ ಭಾಗದÀ ಅನೇಕ ಬಡ ಕುಟುಂಬಗಳಿಗೆ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಆಹಾರದ ಕಿಟ್‍ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು ದೇಶದ ಹಿತ ಕಾಪಾಡುವಲ್ಲಿ ಪ್ರಮಾಣಿಕ ಪ್ರಯತ್ನಗಳನ್ನು ಮಾಡುತ್ತಾ ಜನಪರ ಪಕ್ಷವೆಂದು ಹೆಗ್ಗಳಿಕೆ ಗಳಿಸಿರುವ ಕಾಂಗ್ರೆಸ್ ಬಡವರ ಪಾಲಿಗೆ ಆಪತ್ಬಾಂಧವನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕೊರೋನಾ ಲಾಕ್‍ಡೌನ್ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ದುಡುಕಿನ ನಿರ್ಧಾರಗಳಿಂದಾಗಿ ಬಡವರು ಹಾಗೂ ಕಾರ್ಮಿಕರು ಹೆಚ್ಚಿನ ಸಂಕಷ್ಟವನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದರು.
ಬ್ರಿಜೇಶ್ ಕಾಳಪ್ಪ ಅವರ ಜನಸೇವೆಯನ್ನು ಶ್ಲಾಘಿಸಿದ ಅವರು ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದರು.
ಕೆಪಿಸಿಸಿಯ ಹಿರಿಯ ಮುಖಂಡ ಟಿ.ಪಿ.ರಮೇಶ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಮುಖಂಡರು ಇನ್ನು ಮುಂದೆಯೂ ಬಡವರ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ವಲಯಾಧ್ಯಕ್ಷ ವಿನೋದ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜುಬೇರ್, ಡಿಸಿಸಿ ಸದಸ್ಯ ಎಡಪಾಲ ಶಾಫಿ, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಗ್ರಾ.ಪಂ ಅಧ್ಯಕ್ಷರಾದ ಬೇಬಿ ಶಿವಪ್ಪ, ಸದಸ್ಯರಾದ ವಾಣಿ, ಮಣಿ ಅಯ್ಯಮ್ಮ, ಪ್ರಕಾಶ್ ಮತ್ತಿತರ ಮುಖಂಡರು ಕಿಟ್ ವಿತರಿಸುವ ಸಂದರ್ಭ ಹಾಜರಿದ್ದರು.