ಕುಟ್ಟ- ಮಾನಂದವಾಡಿ ರಸ್ತೆಯಲ್ಲಿ ನಿರ್ಬಂಧ ಮುಂದುವರಿಕೆ

14/06/2020

ಮಡಿಕೇರಿ ಜೂ.14 : ಕೊರೋನಾ ಸೋಂಕು ಹರಡದಂತೆ ತಡೆಯಲು ಸುಮಾರು ಮೂರು ತಿಂಗಳ ಹಿಂದೆ ಬಂದ್ ಮಾಡಲಾಗಿದ್ದ ಕೊಡಗಿನ ಗಡಿ ಕುಟ್ಟ- ಮಾನಂದವಾಡಿ ರಸ್ತೆಯಲ್ಲಿ ನಿರ್ಬಂಧವನ್ನು ಮುಂದುವರೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಕೇರಳ ಸಂಪರ್ಕದ ಕುಟ್ಟ- ಮಾನಂದವಾಡಿ ರಸ್ತೆಗೆ ಮಣ್ಣಿನ ರಾಶಿ ಹಾಕಿ ಜನರು ಹಾಗೂ ವಾಹನಗಳು ಓಡಾಡದಂತೆ ನಿರ್ಬಂಧಿಸಲಾಗಿತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕುಟ್ಟ ಗಡಿ ರಸ್ತೆಯಿಂದ ಮಣ್ಣನ್ನು ತೆಗೆದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ವದಂತಿಗಳು ಹಬ್ಬಿತ್ತು.
ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಮಣ್ಣಿನ ರಾಶಿಯ ಮೇಲೆ ಕಾಡಾನೆಗಳು ಓಡಾಡಿದ ಪರಿಣಾಮ ಎತ್ತರ ಕಡಿಮೆಯಾಗಿತ್ತು. ಕುಟ್ಟ ಪೋಲಿಸ್ ಠಾಣೆಯ ಉಪನಿರೀಕ್ಷಕ ಚಂದ್ರಪ್ಪ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಹೆಚ್ಚಿನ ಮಣ್ಣು ಹಾಕಿ ಎತ್ತರಿಸಲಾಯಿತು.
ಕುಟ್ಟ ಪೋಲಿಸ್ ಠಾಣೆಯ ಮುಂಭಾಗದ ಚೆಕ್ ಪೋಸ್ಟ್ ಗಡಿಯಿಂದ 2 ಕಿ.ಮೀ ದೂರದಲ್ಲಿದೆ. ಪೋಲಿಸ್ ಮತ್ತು ಅರಣ್ಯ ಇಲಾಖೆಯ ಎರಡು ಹಳೆಯ ಕಟ್ಟಡಗಳಿದ್ದು, ಇದರ ನಡುವಿನಿಂದ ಜನರು ನುಸುಳಿ ಹೋಗುತ್ತಿದ್ದರು. ಇದನ್ನು ತಡೆಗಟ್ಟಲು ಕಟ್ಟಡಗಳ ನಡುವೆಯೂ ಮಣ್ಣಿನ ರಾಶಿ ಹಾಕಲಾಗಿದೆ ಎಂದು ಕುಟ್ಟ ಪೋಲಿಸ್ ಅಧಿಕಾರಿ ಮೊಹಿದ್ದೀನ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ತಿಳಿಸಿದರು.