ಭಾಗಮಂಡಲದಲ್ಲಿ ಉತ್ತಮ ಮಳೆ

June 14, 2020

ಮಡಿಕೇರಿ ಜೂ.14 : ಕೊಡಗಿನಲ್ಲಿ ಮುಂಗಾರು ಚೇತರಿಸಿಕೊಳ್ಳುತ್ತಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಶನಿವಾರ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ, ಮಡಿಕೇರಿ ನಗರದಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಚಳಿಯ ವಾತಾವರಣ ಮುಂದುವರೆದಿದೆ. ವಿರಾಜಪೇಟೆ ತಾಲ್ಲೂಕಿನ ವಿವಿಧೆಡೆ ಮಳೆಯಾಗುತ್ತಿದೆ. ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ಮಳೆ ಕ್ಷೀಣಿಸಿದೆ.
ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಅನಾಹುತಗಳಿಂದ ನಲುಗಿ ಹೋಗಿರುವ ಕೊಡಗಿನಲ್ಲಿ ಈ ಬಾರಿಯೂ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಧಾರಾಕಾರ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತ ಎನ್‍ಡಿಆರ್‍ಎಫ್ ತಂಡವನ್ನು ಜಿಲ್ಲೆಯಲ್ಲಿ ನಿಯೋಜಿಸಿದ್ದು, ಅಧಿಕಾರಿಗಳು ಪ್ರವಾಹ ಏರ್ಪಡಬಹುದಾದ ಪ್ರದೇಶಗಳ ಮೇಲೆ ನಿಗಾ ಇರಿಸಿದ್ದಾರೆ.

error: Content is protected !!