ರೇಡಿಯೋ ಕಾಲರ್ ಮೂಲಕ ಕಾಡಾನೆಗಳ ಚಲನವಲನದ ಮೇಲೆ ನಿಗಾ

15/06/2020

ಮಡಿಕೇರಿ ಜೂ.15 : ಕಳೆದ ಹತ್ತು ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಎಡೆಬಿಡದೆ ಕಾಡುತ್ತಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದೀಗ ಕಾಡಾನೆ ದಾಳಿಯನ್ನು ತಪ್ಪಿಸಿ ಮಾನವ ಜೀವಹಾನಿ ತಪ್ಪಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಮೇಲ್ದರ್ಜೆಗೇರಿರುವ ‘ರೇಡಿಯೋ ಕಾಲರ್’ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಕಳೆದ ಮೂರು ವರ್ಷಗಳಿಂದ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗುತ್ತಿದೆ. ಆದರೆ ಇದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಕಡಿಮೆ ಸಿಗ್ನಲ್ ಸಾಮಥ್ರ್ಯ ಮತ್ತು ಆನೆಗಳು ತಿರುಗಾಡುವ ಸಂದರ್ಭ ಬಿದ್ದು ಹೋಗುತ್ತಿದ್ದ ಕಾರಣ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದೀಗ ರೇಡಿಯೋ ಕಾಲರ್‍ನ್ನು ಅಭಿವೃದ್ಧಿ ಪಡಿಸಲಾಗಿದೆ.
ಪ್ರಸ್ತುತ ವಿರಾಜಪೇಟೆ ವಿಭಾಗದಲ್ಲಿ ಈ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಡೆಹರಾಡೂನ್‍ನ ‘ವೈಲ್ಡ್ ಲೈಫ್’ ಇನ್ಸ್‍ಟಿಟ್ಯೂಟ್‍ನ ತಜ್ಞರ ಸಹಕಾರದೊಂದಿಗೆ ಆರಂಭಿಸಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆನೆಗಳ ಉಪಟಳದಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಈ ಭಾಗದಲ್ಲಿ ಈಗಾಗಲೇ ಎರಡು ಕಾಡಾನೆಗಳಿಗೆ ರೆಡಿಯೋ ಕಾಲರನ್ನು ಅಳವಡಿಸಲಾಗಿದ್ದು, ಮತ್ತಷ್ಟು ಆನೆಗಳನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಡಾ.ಸನತ್ ಮುಳಿಯ ನೇತೃತ್ವದ ತಂಡ ಸ್ಥಳೀಯ ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ.
ಕಾಡಾನೆಗಳ ಗುಂಪಿನಲ್ಲಿ ಒಂದು ಹೆಣ್ಣಾನೆ ತಂಡದ ಲೀಡರ್ ನಂತಿರುತ್ತದೆ. ಆ ಗುಂಪಿನೊಂದಿಗೆ ಸಾಕಾನೆಗಳನ್ನು ಸೇರಿಸಿ ಪರಿಣಿತರ ಮೂಲಕ ಗುರುತಿಸಿದ ಆನೆಗೆ ಮತ್ತು ಬರುವ ರೀತಿಯ ಔಷಧಿಯನ್ನು ನೀಡಲಾಗುತ್ತದೆ. ಇದಾದ ನಂತರ ಮತ್ತಿಗೆ ಒಳಪಡುವ ಆನೆಯನ್ನು ಗುಂಪಿನಿಂದ ಸಾಕಾನೆಗಳ ನೆರವಿನೊಂದಿಗೆ ದೂರ ಮಾಡಲಾಗುವುದು. ಸುಮಾರು ಎಂಟತ್ತು ಕಿ.ಮೀ. ಕ್ರಮಿಸಿದ ನಂತರ ಇದಕ್ಕೆ ಮುಂದುವರಿಯಲು ಅಸಾಧ್ಯವಾದಾಗ ಸಾಕಾನೆಯ ಮುಖದ ಭಾಗಕ್ಕೆ ಕಪ್ಪು ಬಟ್ಟೆಯನ್ನು ಸುತ್ತಿ ಏನಾಗುತ್ತಿದೆ ಎಂದು ಅರಿವಾಗದಂತೆ ರೇಡಿಯೋ ಕಾಲರ್ ಪಟ್ಟಿಯನ್ನು ಅಳವಡಿಸಲಾಗುತ್ತದೆ. ನಂತರ ಇದರ ಕಾರ್ಯನಿರ್ವಹಣೆಯನ್ನು ಖಚಿತ ಪಡಿಸಿಕೊಂಡು ನೀರು ಹಾಕುವ ಮೂಲಕ ಅದು ಚೇತರಿಸಿಕೊಳ್ಳುವಂತೆ ಮಾಡಲಾಗುತ್ತದೆ. ಆ ಆನೆ ಕಾಡಾನೆಗಳ ಗುಂಪಿನೊಂದಿಗೆ ಸೇರಿದ ಬಳಿಕ ಚಲನವಲನದ ಮೇಲೆ ನಿಗಾ ವಹಿಸಲಾಗುವುದು.
ಈ ರೇಡಿಯೋ ಕಾಲರ್‍ನಲ್ಲಿ ಜರ್ಮನ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಬ್ಯಾಟರಿ ಆಪರೇಟೆಡ್ ಮೊಬೈಲ್ ಮಾದರಿಯ ಪ್ರತ್ಯೇಕ ಆ್ಯಪ್ ಅನ್ನು ರೀ ಕಾಲರಿಂಗ್ ಮಾಡಲಾಗುತ್ತದೆ. ಇದು ಸುಮಾರು 8 ಕೆ.ಜಿ. ಯಷ್ಟು ತೂಕವಿದ್ದು, ಆನೆಯ ಕುತ್ತಿಗೆಯ ಭಾಗಕ್ಕೆ ಅಳವಡಿಸಲಾಗುವುದು. ಆ ಮೂಲಕ ಕಾಡಾನೆ ಯಾವ ಪ್ರದೇಶದಲ್ಲಿದೆ ಎಂಬುವುದನ್ನು ಅರಿತುಕೊಂಡು ಸ್ಥಳೀಯ ಜನರು, ಬೆಳೆಗಾರರು ಹಾಗೂ ಕಾರ್ಮಿಕರಿಗೆ ಮೊದಲೇ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುವುದು.
ಮುಂದಿನ ದಿನಗಳಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ವಿಭಾಗದಲ್ಲಿ ಈ ರೀತಿಯ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.