ಮಾರುಕಟ್ಟೆ ನಡೆಸಲು ಅನ್ವಯವಾಗುವ ಮಾರ್ಗಸೂಚಿಗಳು

15/06/2020

ಮಡಿಕೇರಿ ಜೂ. 15 : ಮಾರುಕಟ್ಟೆಗಳಲ್ಲಿ ಸಂತೆ ನಡೆಸಲು ಕೆಲವು ಅನ್ವಯವಾಗುವ ಮಾರ್ಗಸೂಚಿಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ನಿಯಮ ಉಲ್ಲಂಘಿಸಿದ್ದಲ್ಲಿ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆಕ್ಟ್ ಮತ್ತು ಸಂಬಂಧಿತ ಕಾಯ್ದೆಗಳಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕಂಟೈನ್ಮೆಂಟ್ ವಲಯಗಳಲ್ಲಿ ತೆರೆಯಲು ಅವಕಾಶವಿಲ್ಲ ಮತ್ತು ಕಂಟೈನ್ ಮೆಂಟ್ ವಲಯದವರಿಗೆ ಅವಕಾಶ ಇರುವುದಿಲ್ಲ, ಸರ್ಕಾರದ ಇತ್ತೀಚಿನ ಆದೇಶದಂತೆ ವಿದೇಶದಿಂದ ಆಗಮಿಸಿದವರಿಗೆ 28 ದಿನಗಳ ಮತ್ತು ಹೊರ ರಾಜ್ಯದಿಂದ ಆಗಮಿಸಿದವರಿಗೆ 14 ದಿನಗಳ ಸಾಂಸ್ಥಿಕ / ಗೃಹ ಸಂಪರ್ಕ ತಡೆ ಕಡ್ಡಾಯವಾಗಿರುತ್ತದೆ. ಆದ್ದರಿಂದ ಕ್ವಾರೆಂಟೈನ್ ಅವಧಿ ಪೂರ್ಣಗೊಳ್ಳುವ ವರೆಗೆ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.

ಕೈಗೆ ಕ್ವಾರೆಂಟೈನ್ ಮೊಹರು ಹಚ್ಚಿದ್ದಲ್ಲಿ ಕ್ವಾರೆಂಟೈನ್ ಅವಧಿ ಪೂರ್ಣಗೊಳ್ಳುವ ವರೆಗೆ ಅವಕಾಶ ಇರುವುದಿಲ್ಲ. ಈ ಬಗ್ಗೆ ನಿಗಾ ವಹಿಸುವುದು, ವ್ಯಾಪಾರಸ್ಥರು, ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ 20 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು, ಒಂದು ಅಂಗಡಿಯಲ್ಲಿ ಒಬ್ಬ ಗ್ರಾಹಕರು ಖರೀದಿ ಮಾಡಿದ ನಂತರ ಮತ್ತೊಬ್ಬ ಗ್ರಾಹಕರಿಗೆ ಅನುವು ಮಾಡಿಕೊಡತಕ್ಕದ್ದು ಮತ್ತು ಪ್ರತೀಯೊಬ್ಬ ಗ್ರಾಹಕರು 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು.
ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, 65 ವರ್ಷಕ್ಕಿಂತ ಹೆಚ್ಚಿನ ವಯೋವೃದ್ದರು, ಸಹ ಅಸ್ವಸ್ಥತೆ ಉಳ್ಳವರು, ಗರ್ಭಿಣಿ ಮಹಿಳೆಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಗಮಿಸುವಂತಿಲ್ಲ.

ಆಗಮನ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಬಳಸಿ ಆಗಮಿಸುವ ಯಾವುದೇ ವ್ಯಕ್ತಿಗೆ ಜ್ವರ (37.5ಲಿ ಅ ಅಥವಾ 99.5 ಲಿ ಈ ಕ್ಕಿಂತ ಹೆಚ್ಚು), ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಸಲಹೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಲು ಸಲಹೆ ನೀಡುವುದು ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡುವುದು., ಆರೋಗ್ಯವಂತ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು., ಗ್ರಾಹಕರು 6 ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆಲದಲ್ಲಿ ಗುರುತು ಮಾಡುವುದು.

ಸಾಧ್ಯವಾದಷ್ಟು ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು., ಸಂತೆ ಮಾರುಕಟ್ಟೆ ಒಳಭಾಗದಲ್ಲಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ಸಾನಿಟೈಜರ್‍ನ್ನು ಕಡ್ಡಾಯವಾಗಿ ಒದಗಿಸಬೇಕು ಮತ್ತು ವ್ಯಾಪಾರದ ಸ್ಥಳವನ್ನು ಸ್ಯಾನಿಟೈಸೇಶನ್ ಮಾಡುವುದು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು, ಅಲ್ಲಲ್ಲಿ ಸೂಕ್ತ ಸ್ಥಳಗಳಲ್ಲಿ, ಕೈ ತೊಳೆಯಲು ಸಾಬೂನು ಮತ್ತು ನೀರನ್ನು ಇಡಲಾಗುವುದು, ವ್ಯಾಪಾರಿಗಳು ವ್ಯಾಪಾರ ಮಾಡುವ ಸ್ಥಳವನ್ನು ಸ್ವಚ್ಚ ಮತ್ತು ನೈರ್ಮಲ್ಯದಿಂದ ಇಡಬೇಕು, ಪ್ರತಿ ಸಂತೆ ಪೂರ್ವಭಾವಿಯಾಗಿ ಹಿಂದಿನ ದಿನ ಹಾಗೂ ತರುವಾಯ ಸಂತೆ ಮಾರುಕಟ್ಟೆ ಆವರಣವನ್ನು 1% ಸೋಡಿಯಂ ಹೈಪೆÇೀಕ್ಲೋರೈಡ್ ದ್ರಾವಣದಿಂದ ಸೋಂಕು ನಿವಾರಣೆಗೊಳಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ, ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕ, ತಂಬಾಕು ಇತ್ಯಾದಿಗಳ ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಸಂತೆ ಮಾರುಕಟ್ಟೆಯಲ್ಲಿ ಐಸ್ ಕ್ರೀಮ್ , ಪಾನಿ ಪೂರಿ ಮುಂತಾದ ಆಹಾರ ಪದಾರ್ಥಗಳನ್ನು ಸ್ಥಳದಲ್ಲೇ ಸೇವಿಸುವಂತಿಲ್ಲ (ಪಾರ್ಸೆಲ್ ತೆಗೆದುಕೊಂಡು ಹೋಗಬಹುದು)., ಮಕ್ಕಳ ಆಟದ ಸ್ಥಳ, ಮನೋರಂಜನೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಲಭ್ಯವಿರುವ ವೈದ್ಯರ ಬಗ್ಗೆ ಮಾಹಿತಿಯನ್ನು ನಾಮಫಲಕದಲ್ಲಿ ಕಡ್ಡಾಯವಾಗಿ ಒದಗಿಸುವುದು. ಮಾರುಕಟ್ಟೆಯ ಮುಖ್ಯ ದ್ವಾರದಲ್ಲಿ ಮತ್ತು ಅಲ್ಲಲ್ಲಿ ಸೂಕ್ತ ಸ್ಥಳಗಳಲ್ಲಿ ಕೋವಿಡ್ -19 ಕುರಿತಂತೆ ಮಾರ್ಗಸೂಚಿಗಳಿರುವ ಎಚ್ಚರಿಕೆ ಫಲಕ ಅಳವಡಿಸಬೇಕು.

ಸಂತೆ ನಡೆಯುವ ಸ್ಥಳದಲ್ಲಿ ಅಲ್ಲಲ್ಲಿ ವ್ಯವಸ್ಥೆಗಳ ಮೇಲುಸ್ತುವಾರಿಗಾಗಿ ಸ್ವಯಂ ಸೇವಕರು ಹಾಗೂ ಮಾರುಕಟ್ಟೆ ಸಮನ್ವಯತೆಗೆ ಸಂಬಂಧಪಟ್ಟ ಪಂಚಾಯತ್ ಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು, ಸಂತೆಗೆ ಹಾಜರಾಗುವ ವ್ಯಾಪಾರಿಗಳ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ಸಂಪರ್ಕ ವಿವರವನ್ನು ಕಡ್ಡಾಯವಾಗಿ ಪಡೆಯುವುದು ಮತ್ತು ಕಾಪಾಡಿಕೊಳ್ಳುವುದು. ಮೊಬೈಲ್ ನಲ್ಲಿ ‘ಆರೋಗ್ಯ ಸೇತು ಆಪ್’ಅನ್ನು ಡೌನ್ ಲೋಡ್ ಮಾಡಿಕೊಂಡು, ಅಳವಡಿಸಬೇಕು.

ಯಾವುದೇ ವಿಚಾರಗಳಿಗೆ ಸ್ಥಳೀಯ ಪಂಚಾಯತ್‍ನ್ನು ಅಥವಾ ಜಿಲ್ಲಾಡಳಿತ ಕಂಟ್ರೋಲ್ ರೂಂ. 1077 ಅಥವಾ ವಾಟ್ಸಪ್ 8550001077ನ್ನು ಸಂಪರ್ಕಿಸುವುದು.