ಡಿಸಿ, ಎಸ್‍ಪಿ ತೇಜೋವಧೆ : ಪತ್ರಕರ್ತನ ಗಡಿಪಾರಿಗೆ ‘ನಮ್ಮ ಕೊಡಗು ತಂಡ’ ಆಗ್ರಹ

15/06/2020

ಮಡಿಕೇರಿ ಜೂ.15 : ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಮಾಡಿರುವ ಪತ್ರಕರ್ತನನ್ನು ಗಡಿಪಾರು ಮಾಡಬೇಕು ಎಂದು ಕುಶಾಲನಗರದ ‘ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್’ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷ ನೌಷಾದ್ ಜನ್ನತ್, ಕಳೆದ ಎರಡು ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ಜಲಪ್ರಳಯ ಹಾಗೂ ಇಂದಿನ ಕೊರೋನಾ ವೈರಸ್‍ನಿಂದ ಎಲ್ಲರೂ ಸಂಕಷ್ಟಕ್ಕೀಡಾಗಿರುವ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ಪರಿಸ್ಥಿತಿಯನ್ನು ಎದುರಿಸಿದ ಮತ್ತು ಜನಸಾಮಾನ್ಯರ ನೋವಿಗೆ ಸ್ಪಂದಿಸಿದ ರೀತಿ ಶ್ಲಾಘನೀಯ. ಈ ಇಬ್ಬರು ಅಧಿಕಾರಿಗಳು ಮಹಿಳೆಯರಾಗಿದ್ದರೂ, ಜಲಪ್ರಳಯ, ಕೊರೋನಾ ವೈರಸ್‍ನಂತಹ ಮಹಾ ಮಾರಿಯನ್ನು ಎದುರಿಸಲು ತೆಗೆದುಕೊಂಡ ನಿರ್ಧಾರಗಳು, ಜನಸಾಮಾನ್ಯನ ಕಷ್ಟಕ್ಕೆ ಸ್ಪಂದಿಸಿದ ರೀತಿ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ಸಿದ್ಧಾಪುರದ ಪತ್ರಕರ್ತರೊಬ್ಬರು ಸಂತ್ರಸ್ತರ ಭಾವನೆಗಳ ಮೇಲೆ ಚೆಲ್ಲಾಟ ಆಡುವುದರ ಜೊತೆಗೆ ಶಾಂತಿಪ್ರಿಯ ಕೊಡಗಿನಲ್ಲಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಿ ಪರಸ್ಪರ ಎತ್ತಿಕಟ್ಟುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಜಿಲ್ಲೆಯ ಜನಸಾಮಾನ್ಯರ ಪರವಾಗಿ ತೆಗೆದುಕೊಳ್ಳುವಂತಹ ನಿರ್ಧಾರಗಳಿಗೆ ಮತ್ತು ಯೋಜನೆಗಳಿಗೆ ಅಪಸ್ವರ ಎತ್ತಿ ವರದಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಮತ್ತು ಮಾಹಿತಿ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಾಕುವ ವೀಡಿಯೋಗಳನ್ನು ‘ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು’ ನಿರ್ಮಿಸಿಕೊಂಡಿರುವುದಾಗಿ ಅರೋಪಿಸಿ ವರದಿ ಮಾಡಿರುವುದು ಖಂಡನೀಯ. ಕೊಡಗಿನ ಅಭಿವೃದ್ಧಿಗೆ, ಜಿಲ್ಲೆಯ ಜನರ ಶಾಂತಿಗೆ ಭಂಗ ತರುವ ಈ ವರದಿಗಾರನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ನೌಶೀದ್ ಜನ್ನತ್ ಆಗ್ರಹಿಸಿದರು.
ಇಂತಹ ಪತ್ರಕರ್ತರಿಂದ ಜಿಲ್ಲೆಯಲ್ಲಿ ಸತ್ಯ-ಧರ್ಮವನ್ನು ಎತ್ತಿಹಿಡಿದು ವಾಸ್ತವಕ್ಕೆ ಹತ್ತಿರವಿರುವ ಸುದ್ದಿಯನ್ನು ಪ್ರಕಟಿಸುತ್ತಿರುವ ಪತ್ರಕರ್ತರು ಹಾಗೂ ಪತ್ರಿಕೆಗಳಿಗೂ ಕೆಟ್ಟ ಹೆಸರು ಬರುವ ಸಾಧ್ಯತೆಗಳಿರುವುದರಿಂದ ಪ್ರಕರಣಗಳನ್ನು ಎದುರಿಸುತ್ತಿರುವ ಪತ್ರಕರ್ತನ ವಿರುದ್ಧ ಜಿಲ್ಲೆಯ ಜನತೆ ಧ್ವನಿ ಎತ್ತುವುದರೊಂದಿಗೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಬೇಕು ಎಂದೂ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಉಮೇಶ್ ಗೌಡ, ಅಜಿತ್ ಕೊಟ್ಟಕೇರಿಯನ, ಜಿನಾಸುದ್ದೀನ್ ಹಾಗೂ ಪಿ.ಬಿ.ಲೋಹಿತ್ ಉಪಸ್ಥಿತರಿದ್ದರು.