ರುಚಿಕರವಾದ ಟೊಮೊಟೊ ರೈಸ್ ಮಾಡುವ ವಿಧಾನ

15/06/2020

ಬೇಕಾಗುವ ಪದಾರ್ಥಗಳು: 4 ಟೊಮೊಟೊ, 2 ಕಪ್ ಬಾಸುಮತಿ ಅಕ್ಕಿ, 1 ಈರುಳ್ಳಿ, 6 ಎಸಳು ಬೆಳ್ಳುಳ್ಳಿ, ಶುಂಠಿ ಸ್ವಲ್ಪ, 2 ಹಸಿರು ಮೆಣಸಿನಕಾಯಿ, 5 ಮೆಣಸು, ಚೆಕ್ಕೆ 2 ತುಂಡು, ಲವಂಗ 4, 2 ಏಲಕ್ಕಿ, 1 ಚಮಚ ಜೀರಿಗೆ ಪುಡಿ, ತುಪ್ಪ, ಉಪ್ಪು.

ಟೊಮೊಟೊ ರೈಸ್ ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಬಟ್ಟಲಿನಲ್ಲಿ ಅರ್ಧ ಗಂಟೆ ನೆನೆಸಿಡಬೇಕು. ನಂತರ ಟೊಮಟೊವನ್ನು ಚೆನ್ನಾಗಿ ಹಿಸುಕಿ ಒಂದೆಡೆ ಇಟ್ಟುಕೊಳ್ಳಬೇಕು. ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸ್ವಲ್ಪ ತರಿತರಿಯಂತೆ ಪೇಸ್ಟ್ ಮಾಡಬೇಕು.

ದೊಡ್ಡ ಬಟ್ಟಲಿಗೆ ಸ್ವಲ್ಪ ತುಪ್ಪ ಹಾಕಿ 2 ನಿಮಿಷ ಓವೆನ್ ನಲ್ಲಿ ಕಾಯಿಸಬೇಕು. ಕಾಯಿಸಿದ ತುಪ್ಪಕ್ಕೆ ಮೆಣಸು, ಚೆಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ 2 ನಿಮಿಷ ವಾಸನೆ ಘಮ್ಮೆನ್ನುವಂತೆ ಕಾಯಿಸಬೇಕು. ಪೇಸ್ಟ್ ಮಾಡಿಟ್ಟುಕೊಂಡಿದ್ದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟನ್ನು ಇದಕ್ಕೆ ಬೆರೆಸಿ ಮತ್ತೆ 2 ನಿಮಿಷ ಓವೆನ್ ನಲ್ಲಿಡಬೇಕು. ಈಗ ಹಿಸುಕಿದ್ದ ಟೊಮೊಟೊಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ 2 ನಿಮಿಷ

ಕೊನೆಗೆ ಜೀರಿಗೆ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಅಕ್ಕಿ ಬೆರೆಸಿ ಚೆನ್ನಾಗಿ ಕಲೆಸಿ 2 ನಿಮಿಷ ಓವೆನ್ ನಲ್ಲಿಡಬೇಕು. ನಂತರ 4 ಕಪ್ ನೀರು ಹಾಕಿ ಮುಚ್ಚುಳ ಮುಚ್ಚಿ 16-18 ನಿಮಿಷ ಬೇಯಿಸಬೇಕು.

ಈಗ ಟೊಮೊಟೊ ರೈಸ್ ತಿನ್ನಲು ರೆಡಿಯಾಗಿದೆ. ಬೇಕೆಂದರೆ ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಬಹುದು. ತರಕಾರಿ ಗ್ರೇವಿಯೊಂದಿಗೆ ಟೊಮೊಟೊ ರೈಸ್ ಬೆರೆಸಿ ತಿಂದರೆ ಇನ್ನೂ ರುಚಿಕರ.