ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘ ಪ್ರತಿಭಟನೆ

15/06/2020

ಮಡಿಕೇರಿ ಜೂ. 15 : ಭೂಸುಧಾರಣಾ ಕಾಯ್ದೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೆಚ್.ಇ.ಸಣ್ಣಪ್ಪ ಮಾತನಾಡಿ, ಈಗಾಗಲೇ ಕೊರೋನಾ ವೈರಸ್‍ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ವಿವಿಧ ವಲಯಗಳಲ್ಲಿ ದುಡಿಯುವ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರದ ಕ್ರಮಗಳನ್ನು ಕೈಗೊಳ್ಳುವ ಬದಲು ದೇಶಕ್ಕೆ ಮಾರಕವಾದ ಹೊಸ ಉದಾರ ನೀತಿಗಳನ್ನು ಜಾರಿಗೊಳಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕೊರೋನಾ ಲಾಕ್‍ಡೌನ್ ಸಂದರ್ಭವನ್ನು ಬಳಸಿಕೊಂಡು ಅಸ್ತಿತ್ವದಲ್ಲಿರುವ ಹಲವಾರು ಕಾಯ್ದೆಗಳನ್ನು ಅಮಾನತುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ಎಂದ ಅವರು, ದೇಶದ ರೈತರಿಗೆ ಮರಣ ಶಾಸನವಾಗುವ ತಿದ್ದುಪಡಿ ಕಾಯ್ದೆಗಳನ್ನು ರೈತರ ಪರ ಎಂದು ಬಿಂಬಿಸಿ ರೈತರಿಗೆ ದ್ರೋಹ ಎಸಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೂರು ಕಾಯ್ದೆಗಳಿಗೆ ತಿದ್ದುಪಡಿ ತುರುವ ಪ್ರಸ್ತಾಪ ಮಾಡಿದೆ. ಅಗತ್ಯ ಸರಕುಗಳ ಸೇವಾ ಕಾಯ್ದೆ, ಕೃಷಿ ಗುತ್ತಿಗೆ ಫಾರ್ಮಿಂಗ್, ಅಂತರರಾಜ್ಯ ಸಂಪರ್ಕಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ರಾಜ್ಯ ಸರ್ಕಾರದ ಆಧೀನಕ್ಕೊಳಪಟ್ಟಿದ್ದವು. ಈ ಕಾಯ್ದೆಗಳಿಗೆ ತಿದ್ದುಪಡಿ ತಂದು ರಾಜ್ಯದ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯಿಂದ ಮೆಣಸಿನಕಾಯಿ, ಆಲೂಗಡ್ಡೆ, ಈರುಳ್ಳಿ, ಮೆಕ್ಕೆಜೋಳ ಸಿರಿಧಾನ್ಯ ಇತರೆ ಕೃಷಿ ಉತ್ಪನ್ನಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಲಿದ್ದು, ಕಂಪೆನಿಗಳು ಖರೀದಿ ಮತ್ತು ದೊಡ್ಡ ಮಟ್ಟದ ದಾಸ್ತಾನು ಮಾಡುವುದರೊಂದಿಗೆ ಗ್ರಾಹಕರನ್ನು ತೀವ್ರವಾಗಿ ಶೋಷಣೆ ಮಾಡುವ ಸಾಧ್ಯತೆ ಇದೆ ಎಂದು ನಿರ್ವಾಣಪ್ಪ ಆರೋಪಿಸಿದರು.
::: ಬೇಡಿಕೆಗಳು :::
ಅಗತ್ಯ ಸರಕುಗಳ ಕಾಯ್ದೆ, ಕೃಷಿ ವ್ಯಾಪಾರ ಅಂತರಾಜ್ಯ ಸಂಪರ್ಕ ಕಾಯ್ದೆ, ಕೃಷಿ ಗುತ್ತಿಗೆ ಫಾರ್ಮಿಂಗ್ ಕಾಯ್ದೆಗಳಿಗೆ ತಿದ್ದುಪಡಿ ತರುವ ಕಾರ್ಯವನ್ನು ಕೈಬಿಡಬೇಕು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಕೈ ಹಾಕಬಾರದು, ವಲಸೆ ಕಾರ್ಮಿಕರಿಗೆ ಮತ್ತು ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು 50 ಕೆ.ಜಿ. ಅಕ್ಕಿ ಇತರೆ ಅಗತ್ಯ ದಿನಸಿಗಳನ್ನು ಉಚಿತವಾಗಿ ಹಂಚಬೇಕು, ಅಥವಾ 10 ಸಾವಿರ ರೂ. ಸಹಾಯಧನ ನೀಡಬೇಕು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳವರೆಗೆ ಮತ್ತು ದಿನದ ಕೂಲಿಯನ್ನು 400 ರೂ. ಗೆ ಹೆಚ್ಚಿಸಬೇಕು, ನಗರ, ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಖಾತ್ರಿ ಕೆಲಸವನ್ನು ವಿಸ್ತರಿಸಬೇಕು, 14 ರೀತಿಯ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯನ್ನು ರದ್ದುಗೊಳಿಸಬೇಕು, ಎಂ.ಎಸ್ ಸ್ವಾಮಿನಾಥನ್ ವರದಿ ಆಧರಿಸಿ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು, ದೇಶಾದ್ಯಂತ ಕಾಲ್ನಡಿಗೆ ಮತ್ತು ಇತರೆ ದುರ್ಘಟನೆಗಳಲ್ಲಿ ಮೃತಪಟ್ಟ ವಲಸೆ ಕಾರ್ಮಿಕರಿಗೆ 25 ಲಕ್ಷ ರೂ. ಪರಿಹಾರ ವದಗಿಸಬೇಕು, ಅಕ್ರಮ ಸಕ್ರಮ ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಭೂ ಹೀನರೈತರಿಗೆ ಭೂಮಿ ಮಂಜೂರಿ ನೀಡಬೇಕು, ಅರ್ಜಿ ಸಲ್ಲಿಸಲು ಸಾಧ್ಯವಾಗದ ಜನರಿಗೆ ಪುನಃ 57ರ ಅರ್ಜಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನಿಸಬೇಕು, ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಾಪಾಸ್ಸು ಪಡೆಯಬೇಕು, ಮೂರು ತಲೆ ಮಾರಿನಿಂದ ಸಾಗುವಳಿ ಮಾಡುವ ಜನರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದು, ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಕೃಷಿ ಯೋಗ್ಯ ಭೂಮಿಯನ್ನು ಕೃಷಿಯೇತ್ತರ ಚಟುವಟಿಕೆಗಳಿಗೆ ಬಳಸಬಾರದು, ಬಂಡವಾಳ ಶಾಹಿ ಕಾರ್ಪೋರೇಟ್ ಶಕ್ತಿಗಳಿಗೆ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಟಿ ಆನಂದ್, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಜಿಲ್ಲಾ ಸಮಿತಿ ಸದಸ್ಯರು ಅನಿತ, ಪ್ರಕಾಶ್, ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.