ಬಿ.ಎ.ಜೀವಿಜಯ ಅವರೇ ನಮ್ಮ ನಾಯಕರು : ಕೆ.ಎಂ.ಗಣೇಶ್ ಸ್ಪಷ್ಟನೆ

15/06/2020

ಸೋಮವಾರಪೇಟೆ ಜೂ.15 : ಮಾಜಿ ಸಚಿವರು ಹಾಗು ಹಿರಿಯ ಜೆಡಿಎಸ್ ನಾಯಕರಾದ ಬಿ.ಎ.ಜೀವಿಜಯ ಅವರೇ ನಮ್ಮ ನಾಯಕರು ಅವರ ಸಲಹೆ ಪಡೆದುಕೊಂಡೆ ಪಕ್ಷದ ಸಂಘಟನೆ ಮಾಡುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಹೇಳಿದರು.
ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷದಲ್ಲಿರುವಷ್ಟು ಒಡುಕು ಜೆಡಿಎಸ್‍ನಲ್ಲಿ ಇಲ್ಲ. ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ. ಈಗ ಎಲ್ಲವೂ ಸರಿಯಾಗಿದೆ. ಜೀವಿಜಯ ಅವರ ಮನೆಗೆ ಹೋಗಿ ಆಶೀರ್ವಾದ ಪಡೆದು ಬಂದಿದ್ದೇನೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾಲೂಕು, ಹೋಬಳಿ ಹಾಗು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. ಯುವ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು. ಪಕ್ಷದಲ್ಲಿ ದುಡಿದವರಿಗೆ ಮಾತ್ರ ಗ್ರಾಪಂ, ತಾಪಂ, ಜಿಪಂ, ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಇತರ ಪಕ್ಷದಿಂದ ಜೆಡಿಎಸ್‍ಗೆ ಬರುವವರಿಗೆ ಮುಕ್ತ ಅಹ್ವಾನವಿದೆ. ಚುನಾವಣೆ ಸಂದರ್ಭದಲ್ಲಿ ಟಿಕೇಟ್ ಪಡೆಯುವ ಉದ್ದೇಶದಿಂದ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
2018ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ಥರಿಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 848 ಮನೆಗಳನ್ನು ಕೊಟ್ಟರು. ಮನೆ ಕುಸಿತಕ್ಕೆ 1 ಲಕ್ಷ ರೂ., ಮನೆ ಬಾಡಿಗೆಗೆ 10 ಸಾವಿರ ರೂ, ನೀಡಿದ್ದರು. ಅಲ್ಲದೆ 1 ಲಕ್ಷ ರೂ, ಗಳ ರೈತರ ಸಾಲಮನ್ನಾ ಮಾಡುವ ಮೂಲಕ ನುಡಿದಂತೆ ನಡೆದರು. ಇಂತಹ ಸಾಧನೆಯನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಿ ಪಕ್ಷ ಕಟ್ಟಬೇಕು ಎಂದರು.
2019ರಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಬಿಜೆಪಿ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಬರಿ ಸುಳ್ಳು ಆಶ್ವಾಸನೆ ನೀಡುತ್ತಿದೆ. ನಿರಾಶ್ರಿತರಿಗೆ ಸೂಕ್ತ ಪರಿಹಾರ ಕಲ್ಪಿಸುವ ತನಕ ಹೋರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಜೂ.23ರಂದು ನಾಪೊಕ್ಲುವಿಂದ ಮೂರ್ನಾಡು ವರೆಗೆ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ. ವಸತಿ ಸಚಿವರೆ ಜಿಲ್ಲೆಯ ಉಸ್ತುವಾರಿಗಳಾಗಿದ್ದಾರೆ. ಆದರೆ ಜಿಲ್ಲೆಯ ಸಂತ್ರಸ್ಥರಿಗೆ, ನಿರ್ಗತಿಕರಿಗೆ ಮನೆ ಕೊಟ್ಟಿಲ್ಲ. ಅಭಿವೃದ್ಧಿಯಲ್ಲಿ ಅವರದು ಶೂನ್ಯ ಕೊಡುಗೆ ಎಂದು ದೂರಿದ ಅವರು, ಜಿಲ್ಲೆಯವರು ಉಸ್ತುವಾರಿ ಸಚಿವರಾದರೆ ಮಾತ್ರ, ಅಭಿವೃದ್ಧಿ ನಿರೀಕ್ಷೆ ಮಾಡಬಹುದು ಎಂದರು.
ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದು ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಹೇಳಿದರು. ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳ್ಳುಸೋಗೆ ರಾಜೇಶ್, ತಾಲೂಕು ಕಾರ್ಯದರ್ಶಿ ಡಿ.ಎಸ್.ಚಂಗಪ್ಪ ಇದ್ದರು.