ಹಾಡಹಗಲೇ ನಡುರಸ್ತೆಯಲ್ಲಿ ಕಾಡಾನೆಗಳ ವಾಕಿಂಗ್ : ಅಭ್ಯತ್‍ಮಂಗಲದಲ್ಲಿ ಆತಂಕ

16/06/2020

ಮಡಿಕೇರಿ ಜೂ.16 : ಕೊರೋನಾ ಲಾಕ್‍ಡೌನ್ ಸಡಿಲಿಕೆಯಿದ್ದರೂ ಕೊಡಗು ಜಿಲ್ಲೆಯ ಜನ ಮಾತ್ರ ಊರಿಂದ ಊರಿಗೆ ಪ್ರಯಾಣ ಬೆಳೆಸುವ ಧೈರ್ಯ ಮಾಡುತ್ತಿಲ್ಲ. ಈ ಕಾರಣದಿಂದ ಇಲ್ಲಿನ ರಸ್ತೆಗಳು ವಿರಳ ಸಂಖ್ಯೆಯ ವಾಹನಗಳ ಓಡಾಟದೊಂದಿಗೆ ನಿರ್ಜನ ಪ್ರದೇಶದಂತೆ ಗೋಚರಿಸುತ್ತಿದೆ. ಆದರೆ ಅಭ್ಯತ್‍ಮಂಗಲ ಗ್ರಾಮದ ಮುಖ್ಯ ರಸ್ತೆ ಮಾತ್ರ ನಿತ್ಯ ಕಾಡಾನೆಗಳ ಹಿಂಡಿನ ವಾಕಿಂಗ್ ಸ್ಪಾಟ್ ಆಗಿ ಮಾರ್ಪಟ್ಟಿದೆ.
“ಆನೆಗಳಿಗೆ ಓಡಾಟ, ಮನುಷ್ಯರಿಗೆ ಪ್ರಾಣ ಸಂಕಟ” ಎನ್ನುವ ಪರಿಸ್ಥಿತಿ ಇಲ್ಲಿದೆ. ಸುಮಾರು 20 ಕ್ಕೂ ಹೆಚ್ಚು ಕಾಡಾನೆಗಳು ಗುಂಪು ಗುಂಪಾಗಿ ಹಾಡಹಗಲೇ ರಸ್ತೆಯಲ್ಲಿ ಓಡಾಡುತ್ತಿವೆ. ವಾಹನಗಳ ಶಬ್ಧವಿಲ್ಲದೆ ಸ್ವಚ್ಛಂದವಾಗಿರುವ ಪರಿಸರದಲ್ಲಿ ಸ್ವತಂತ್ರ್ಯವಾಗಿ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಅಕ್ಕಪಕ್ಕದ ತೋಟಗಳಲ್ಲಿ ಬೀಡುಬಿಟ್ಟಿವೆ. ಕಾರ್ಮಿಕರು ಕೂಡ ವಿರಳ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ತೋಟಗಳು ಈಗ ಆನೆಗಳ ಆವಾಸ ಸ್ಥಾನವಾಗಿಬಿಟ್ಟಿದೆ. ಯಾವುದೇ ಪ್ರತಿರೋಧಕ್ಕೂ ಅಂಜದೆ ರಾಜಾರೋಷವಾಗಿ ರಸ್ತೆಯಲ್ಲಿ ಅಡ್ಡಾಡುವ ಆನೆಗಳು ತೋಟಗಳಲ್ಲಿರುವ ಬಾಳೆ, ಹಲಸನ್ನು ತಿಂದು ತೇಗುತ್ತಿವೆ.
ತೋಟಗಳಲ್ಲೇ ಮರಿಗೂ ಜನ್ಮ ನೀಡುತ್ತಿರುವ ಹೆಣ್ಣಾನೆಗಳು ತೋಟ ಬಿಟ್ಟು ಕದಲುತ್ತಿಲ್ಲ. ಬೆಳೆಗಾರ ಕೆ.ಎ.ಬೋಪಯ್ಯ ಎಂಬುವವರ ತೋಟದಲ್ಲಿ ಮತ್ತು ಪಿಂಟೋ ಎಸ್ಟೇಟ್‍ನಲ್ಲಿ ಮರಿಯಾನೆಗಳ ಜನನವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸಂಚರಿಸುತ್ತಿವೆಯೇ ಹೊರತು ಅರಣ್ಯವನ್ನು ಸೇರುತ್ತಿಲ್ಲ.
ಅಭ್ಯತ್‍ಮಂಗಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೂ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನ ಚಾಲಕರು ಅಭ್ಯತ್‍ಮಂಗಲ ರಸ್ತೆಯಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರು ಹಾಗೂ ಬೆಳೆಗಾರರು ಆನೆ ಹಾವಳಿಯಿಂದ ಬೇಸತ್ತಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.