ಕಾಯ್ದೆ ತಿದ್ದುಪಡಿ ನೈಜ ಕೃಷಿಕರಿಗೆ ಮಾರಕ : ಕಂದಾಯ ಸಚಿವರ ವಿರುದ್ಧ ವೀಣಾಅಚ್ಚಯ್ಯ ಅಸಮಾಧಾನ

16/06/2020

ಮಡಿಕೇರಿ ಜೂ.16 : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ನೈಜ ಕೃಷಿಕರಿಗೆ ಮಾರಕವಾಗಿದ್ದು, ಸಾಮಾನ್ಯ ರೈತರು ಬಂಡವಾಳಶಾಹಿಗಳ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಕಂದಾಯ ಸಚಿವರು ಕಾವೇರಿನಾಡು ಕೊಡಗಿನ ಕೃಷಿ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೀಣಾಅಚ್ಚಯ್ಯ ಅವರು ಕೃಷಿ ಮತ್ತು ತೋಟಗಾರಿಕೆಯನ್ನೇ ಜೀವಾಳವಾಗಿ ಮಾಡಿಕೊಂಡಿರುವ ಕೊಡಗು ಜಿಲ್ಲೆಯ ಅಸ್ತಿತ್ವಕ್ಕೇ ತಿದ್ದುಪಡಿ ಕಾಯ್ದೆ ದಕ್ಕೆಯಾಗಲಿದೆ. ಜಿಲ್ಲೆಯ ಭೂಮಿ ನಿಯಮ ಮೀರಿ ಮಾರಾಟವಾಗಲಿದೆ ಎಂದರು. ರಾಜ್ಯ ಕಂದಾಯ ಸಚಿವರು ಕೊಡಗಿನ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಸಾಕಷ್ಟು ಜಮೀನು ಪಾಳು ಬಿದ್ದಿವೆ ಎಂದು ಹೇಳಿದ್ದಾರೆ. ಜಮೀನು ಪಾಳು ಬೀಳಲು ತನ್ನದೇ ಆದ ಕಾರಣಗಳಿವೆ. ಕಂದಾಯ ಸಚಿವರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಜಿಲ್ಲೆಯ ಬಾಣೆ ಜಮೀನಿನ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಹುದಿತ್ತು. ಆದರೆ ಬಡ ಕೃಷಿಕರ ಭೂಮಿಯ ಮೇಲೆ ಕಣ್ಣು ಹಾಕಿ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು ಹೊಟ್ಟಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಸಚಿವರು ಜಿಲ್ಲೆಗೆ ಬಂದಾಗಲೇ ನಮಗೆ ಸಂಶಯ ಮೂಡಿತ್ತು. ರಾಜ್ಯ ಸರ್ಕಾರ ನೈಜ ಕೃಷಿಕರಿಗೆ ಮಾಡುತ್ತಿರುವ ಅನ್ಯಾಯವನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು. ತಂದೆ, ತಾಯಿ ಕಷ್ಟಪಟ್ಟು ಮಾಡಿಟ್ಟ ಕೃಷಿಭೂಮಿ ಪರರ ಪಾಲಾಗುವುದನ್ನು ತಡೆಯಲು ಯುವ ಸಮೂಹ ಹೋರಾಟಕ್ಕೆ ದುಮುಕಬೇಕು ಎಂದು ಮನವಿ ಮಾಡಿದರು.
ಯಾರೂ ಕೇಳುವವವರಿಲ್ಲವೆಂದು ಬಿಜೆಪಿ ಸರ್ಕಾರ ದುರಹಂಕಾರದ ವರ್ತನೆಯನ್ನು ಪ್ರದರ್ಶಿಸುತ್ತಿದೆ. ದುರುದ್ದೇಶದಿಂದಲೇ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿದೆ. ಜಾತಿ ಆಧಾರದಲ್ಲಿ ಅಧಿಕಾರಕ್ಕೆ ಬಂದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ ಎಂದು ವೀಣಾಅಚ್ಚಯ್ಯ ಟೀಕಿಸಿದರು.
ರಾಜ್ಯ ಸರ್ಕಾರ 1961ರ ಭೂ ಸುಧಾರಣಾ ಕಾಯ್ದೆಯ 79 ಎ, ಬಿ, ಸಿ ಮತ್ತು 80ನೇ ಕಲಂ ಗಳನ್ನು ಪೂರ್ವನ್ವಯವಾಗುವಂತೆ ರದ್ದುಪಡಿಸಿದೆ. ಅಲ್ಲದೇ 63ನೇ ಕಲಂಗೆ ತಿದ್ದುಪಡಿ ತಂದಿದೆ. ಈ ಕ್ರಮದ ಮೂಲಕ ಬಿಜೆಪಿ ಬಂಡವಾಳಶಾಹಿಗಳ ಪರವಾದ ಆಡಳಿತ ನಡೆಸುತ್ತ್ತಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
1961ರ ಕಾಯ್ದೆಯಲ್ಲಿ ಆದಾಯ ಉಳ್ಳವರು ಹಾಗೂ ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಕಬಳಿಸದಂತೆ ರಕ್ಷಣೆ ಒದಗಿಸಲಾಗಿದೆ. ನೈಜ ರೈತರೆಂದು ಸರಿಯಾದ ಪ್ರಮಾಣಪತ್ರ ಒದಗಿಸದೆ ಜಮೀನನ್ನು ಖರೀದಿಸುವವರಿಗೆ ದಂಡ ವಿಧಿಸುವ ಅವಕಾಶವಿತ್ತು. ರೈತರಲ್ಲದವರಿಗೆ ಕೃಷಿ ಭೂಮಿಯನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು. ಕೃಷಿ ಭೂಮಿ ವರ್ಗೀಕರಣವನ್ನು ಆಧರಿಸಿ ಒಂದು ಕೃಷಿ ಕುಟುಂಬವು ಸರಾಸರಿ 48 ರಿಂದ 108 ಏಕರೆಗಳಿಗಿಂತ ಹೆಚ್ಚು ಭೂಮಿ ಹೊಂದಿರಬಾರದೆಂಬ ನೀತಿಯನ್ನು ವಿಧಿಸಿತ್ತು.
ಆದರೆ ಇದೀಗ ರಾಜ್ಯ ಸರ್ಕಾರ ಕೈಗೊಂಡಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಶ್ರೀಮಂತರು ಹಾಗೂ ದೊಡ್ಡ ದೊಡ್ಡ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದಾಗಿದೆ. ಸಣ್ಣ ರೈತಾಪಿಗಳು ಮತ್ತಷ್ಟು ವೇಗವಾಗಿ ಹಾಗೂ ಶಾಸನ ಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ.
ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತ ಹೆಚ್ಚಾಗಿ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತ್ವ ಕ್ರಮೇಣವಾಗಿ ಇಲ್ಲವಾಗುತ್ತಾ ಹೋಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮೂಲ ಕೃಷಿ ಕಸುಬನ್ನೇ ಹೊಂದಿರುವ ಬಡ ರೈತಾಪಿ ವರ್ಗದ ಹಿತ ಕಾಪಾಡಲು ಈ ಹಿಂದಿನ ಕಾಯ್ದೆಯನ್ನು ಮುಂದುವರೆಸಬೇಕು ಮತ್ತು ತಿದ್ದುಪಡಿಯನ್ನು ರದ್ದು ಪಡಿಸಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
ರೈತರ ಹಿತವನ್ನು ಕಡೆಗಣಿಸಿ ಕಾಯ್ದೆ ಜಾರಿಗೆ ಮುಂದಾದಲ್ಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ರೀತಿಯ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
::: ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ :::
ಕೋಟಿ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಲಾಕ್‍ಡೌನ್ ಸಡಿಲಿಕೆಯಾದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಒಂದು ಕಡೆ ಪರಿಹಾರ ಕೊಟ್ಟಂತೆ ಮಾಡಿ ನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಜನಸಾಮಾನ್ಯರಿಂದ ಮರಳಿ ಕಸಿದುಕೊಳ್ಳುತ್ತಿದೆ. ಕೇಂದ್ರದಲ್ಲಿ ಕರುಣೆ ಇಲ್ಲದ ಸರ್ಕಾರ ಆಡಳಿತ ನಡೆಸುತ್ತಿದ್ದು, ಬಂಡವಾಳಶಾಹಿಗಳಿಗೆ ಉಪಯೋಗವಾಗುವಂತಹ ಪ್ಯಾಕೇಜ್‍ಗಳನಷ್ಟೇ ಘೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
::: ಕಾರ್ಮಿಕರ ಕೊರತೆ :::
ಉದ್ಯೋಗಖಾತ್ರಿ ಯೋಜನೆಯ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಈ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸರ್ಕಾರದ ಗೊಂದಲಮಯ ನಿರ್ಧಾರಗಳಿಂದಾಗಿ ಜಿಲ್ಲೆಯಲ್ಲಿದ್ದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರುಗಳು ಜಿಲ್ಲೆಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಕೊಡಗಿನಲ್ಲಿ ಕಾರ್ಮಿಕರ ಕೊರತೆ ಎದುರಾಗಿದ್ದು, ಕಟ್ಟಡ ಕಾಮಗಾರಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ ಎಂದು ಟೀಕಿಸಿದರು.
::: ಸಂತ್ರಸ್ತರಿಗೆ ವಸತಿ ನೀಡಿಲ್ಲ :::
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ಸಂಭವಿಸಿದ್ದು, ದಕ್ಷಿಣ ಕೊಡಗಿನಲ್ಲಿ ಅನೇಕ ಮನೆಗಳು ಪ್ರವಾಹದಿಂದ ಹಾನಿಗೀಡಾಗಿವೆ. ಬಡವರು ಹಾಗೂ ಕಾರ್ಮಿಕ ವರ್ಗ ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಘಟನೆ ನಡೆದು ಒಂದು ವರ್ಷ ಕಳೆದರು ರಾಜ್ಯ ಸರ್ಕಾರ ಮಾತ್ರ ಮಳೆಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ನೂತನ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ. ಮನೆಗಳನ್ನು ನಿರ್ಮಿಸಿಕೊಡುವುದಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭರವಸೆಯನ್ನು ನೀಡಿತ್ತು. ಆದರೆ ಇಲ್ಲಿಯವರೆಗೆ ಮನೆಗಳನ್ನು ನಿರ್ಮಿಸಲು ನಿವೇಶನವನ್ನೇ ಗುರುತಿಸುವ ಕಾರ್ಯ ಪೂರ್ಣಗೊಂಡಿಲ್ಲ.
ವಿರಾಜಪೇಟೆಯ ತೋರ ಗ್ರಾಮ, ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ವಿವಿಧೆಡೆ ಅನೇಕರು ಮಳೆಹಾನಿ ಸಂಕಷ್ಟವನ್ನು ಎದುರಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಇವರುಗಳ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅಂದು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಸುಮಾರು 800 ಮನೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ 450ಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಉಳಿದಿರುವ ಮನೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಜಿಲ್ಲಾಡಳಿತ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂತ್ರಸ್ತರಿಗೆ ವಾಸಿಸಲು ಅನುವು ಮಾಡಿಕೊಡಬೇಕು. ನೂತನ ಮನೆ ಸಿಕ್ಕಿದ್ದರೂ ಕೆಲವು ಫಲಾನುಭವಿಗಳು ಅಪಾಯದಂಚಿನಲ್ಲಿರುವ ತಮ್ಮ ಹಳೆಯ ಮನೆಗಳಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ. ಈ ರೀತಿಯ ಬೆಳವಣಿಗೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡದೆ ಫಲಾನುಭವಿಗಳು ತಮಗೆ ದೊರೆತ ನೂತನ ಮನೆಗಳಲ್ಲೇ ವಾಸಿಸುವಂತೆ ಸೂಚಿಸಬೇಕು. ಈ ಬಾರಿ ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.
::: ವನ್ಯಜೀವಿಗಳ ದಾಳಿಯನ್ನು ನಿರ್ಲಕ್ಷಿಸಿದ ಸರ್ಕಾರ :::
ಹುಲಿ, ಚಿರತೆ, ಕಾಡಾನೆ ಸೇರಿದಂತೆ ವನ್ಯಜೀವಿಗಳು ವಿರಾಜಪೇಟೆ ತಾಲ್ಲೂಕಿನಲ್ಲಿ ಉಪಟಳ ನೀಡುತ್ತಿದ್ದು, ಸಾಕಷ್ಟು ಫಸಲು, ಜಮೀನು ಮತ್ತು ಜೀವಹಾನಿಯಾಗಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ವನ್ಯಜೀವಿ ದಾಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಇಲ್ಲಿಯವರೆಗೆ ರೈತರು, ಬೆಳೆಗಾರರು ಹಾಗೂ ಕಾರ್ಮಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸಿಲ್ಲ. ವನ್ಯಜೀವಿ ದಾಳಿ ಕುರಿತು ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.
ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆಸಿ ವಿಶೇಷ ಸಭೆ ನಡೆಸಬೇಕು ಮತ್ತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು.
::: ಅನುದಾನ ಎಲ್ಲಿಗೆ ಹೋಯಿತು ? :::
ಜಿಲ್ಲೆಯ ರಸ್ತೆಗಳು ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕಾಣದೆ ಸಂಚಾರಕ್ಕೆ ಅಯೋಗ್ಯವಾಗಿದೆÉ. ಮಡಿಕೇರಿ ನಗರದ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಇವುಗಳನ್ನು ದುರಸ್ತಿ ಪಡಿಸುವ ಬಗ್ಗೆ ಆಡಳಿತ ನಡೆಸುತ್ತಿರುವವರು ಕಾಳಜಿ ತೋರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣಕ್ಕಾಗಿ ಮಡಿಕೇರಿ ನಗರಸಭೆಗೆ ಬಿಡುಗಡೆಯಾದ ಅನುದಾನ ಎಲ್ಲಿ ಹೋಯಿತು ಎನ್ನುವ ಬಗ್ಗೆ ಸ್ಪಷ್ಟತೆ ಬೇಕಾಗಿದೆ ಎಂದರು.
::: ಸೇತುವೆ ಕಾಮಗಾರಿ ನೆನೆಗುದಿಗೆ :::
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾಗಮಂಡಲದಲ್ಲಿ ಮೇಲು ಸೇತುವೆ ಯೋಜನೆಯನ್ನು ಆರಂಭಿಸಲಾಯಿತು. ಸೇತುವೆ ನಿರ್ಮಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದನ್ನು ಪೂರ್ಣಗೊಳಿಸುವ ಕಾಳಜಿ ತೋರುತ್ತಿಲ್ಲ.
::: ಮಡಿಕೇರಿ ಜಿಲ್ಲೆ ಅಲ್ಲ :::
ತನ್ನದೇ ಆದ ವಿಶಿಷ್ಠತೆ ಹೊಂದಿರುವ ಕೊಡಗು ಜಿಲ್ಲೆ ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯನ್ನು ಮಡಿಕೇರಿ ಜಿಲ್ಲೆ ಎಂದು ಪ್ರತಿಬಿಂಬಿಸಲಾಗುತ್ತಿದೆ. ವಿಧಾನಸಭೆಯಲ್ಲೂ ಮಡಿಕೇರಿ ಜಿಲ್ಲೆ ಎಂದು ಹೇಳುತ್ತಾರೆ. ಕೊಡಗು ಜಿಲ್ಲೆಯನ್ನು ಕೊಡಗು ಜಿಲ್ಲೆ ಎಂದೇ ಪರಿಗಣಿಸಬೇಕು ಮತ್ತು ಸರ್ಕಾರದ ಕಡತಗಳಲ್ಲೂ ಹೀಗೆ ನಮೂದಿಸಬೇಕು ಎಂದು ಒತ್ತಾಯಿಸಿದರು. ಮಡಿಕೇರಿ ಒಂದು ತಾಲ್ಲೂಕು ಆಗಿದ್ದು, ಜಿಲ್ಲೆಯಲ್ಲ ಎನ್ನುವುದನ್ನು ಸರ್ಕಾರ ಹಾಗೂ ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ ಎಂದು ವೀಣಾಅಚ್ಚಯ್ಯ ಹೇಳಿದರು.
::: ಕಮಿಷನ್‍ಗಾಗಿ ತಿದ್ದುಪಡಿ :::
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ರೈತರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆಹಾರ ಕ್ಷೇತ್ರಕ್ಕೆ ದಕ್ಕೆಯಾಗಲಿದೆ ಎಂದು ಟೀಕಿಸಿದರು. ಸರ್ಕಾರದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿರುವ ಕಾರಣ ಮತ್ತು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಮಿಷನ್‍ಗಾಗಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ರೈತರನ್ನು ದುರ್ಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ ಹೊರಟಿದ್ದು, ನೈಜ ರೈತನ ಕೃಷಿ ಜಮೀನು ಭ್ರಷ್ಟರ ಪಾಲಾಗಲಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಜೂ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಾಗುವುದು ಎಂದು ಮಂಜುನಾಥ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಹಾಗೂ ಪ್ರಮುಖರಾದ ವಸಂತ ಉಪಸ್ಥಿತರಿದ್ದರು.