ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಮಡಿಕೇರಿಯಲ್ಲಿ ಸಿಪಿಐಎಂ ಪ್ರತಿಭಟನೆ

16/06/2020

ಮಡಿಕೇರಿ ಜೂ.16 : ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಗುತ್ತಿಗೆ ಆಧಾರದ ವೈದ್ಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ನಿಗಧಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ)ದ ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಡಾ.ಇ.ರಾ.ದುರ್ಗಪ್ರಸಾದ್ ಅವರು ಕೇಂದ್ರ ಸರ್ಕಾರ ಕೊರೋನಾ ಲಾಕ್‍ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳದೆ ಕೇವಲ ಸುಳ್ಳು ಆಶ್ವಾಸನೆಗನ್ನು ನೀಡಿ ದೃಶ್ಯಮಾಧ್ಯಮ, ಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಕೈಗಾರಿಕೆಗಳು, ಕಾರ್ಮಿಕರು ಹಾಗೂ ರೈತರಿಗೆಂದು ವಿಶೇಷ ಪ್ಯಾಕೇಜ್ ಘೋಷಿಸಿದಂತೆ ಮಾಡಿದ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವ ಮೂಲಕ ಜನಸಮಾನ್ಯರನ್ನು ಸಂಕಷ್ಟದ ಪರಿಸ್ಥಿತಿಗೆ ದೂಡಿದೆ. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹಣವಿಲ್ಲದೆ ಜನ ಪರದಾಡುತ್ತಿರುವಾಗಲೇ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿರುವ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಏನೂ ಪ್ರಯೋಜನವಿಲ್ಲವೆಂದು ದುರ್ಗಾಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
::: ಬೇಡಿಕೆಗಳು :::

ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯ ಸ್ವಚ್ಛತೆ ಸಿಬ್ಬಂದಿಗಳು ಹಾಗೂ ವೈದ್ಯರನ್ನು ಗುತ್ತಿಗೆ ಆಧಾರದ ಸ್ಕೀಂ ಕಾರ್ಯಕರ್ತರೆಂದು ಪರಿಗಣಿಸಿ ಕನಿಷ್ಟ ತುಚ್ಛ ಸಂಬಳದಲ್ಲಿ ದುಡಿಸುವುದನ್ನು ನಿಲ್ಲಿಸಬೇಕು, ಕನಿಷ್ಟ ವೇತನ ಹಾಗೂ ಇತರ ಸೌಕರ್ಯವನ್ನು ಒದಗಿಸಬೇಕು, ಆದಾಯ ತೆರಿಗೆ ಕೊಡುವ ಮಿತಿಗಳ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 7,500 ರೂ. ನಂತೆ ಆರು ತಿಂಗಳವರೆಗೆ ನಗದು ವರ್ಗಾವಣೆ ಮಾಡಬೇಕು, ರಾಷ್ಟ್ರೀಯ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳ ರದ್ದತಿಯನ್ನು ನಿಲ್ಲಿಸಬೇಕು, ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ನಿಯಂತ್ರಿಸಬೇಕು, ಕಾಫಿ, ಭತ್ತ, ಕರಿಮೆಣಸು ಮೊದಲಾದ ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ವರದಿಯಲ್ಲಿನ ಶಿಫಾರಸ್ಸುಗಳ ಆಧಾರದಲ್ಲಿ ಬೆಲೆ ಘೋಷಿಸಬೇಕು, ಆ ದರಕ್ಕೆ ಸರಕಾರ ಬೆಳೆಗಾರರಿಂದ ಬೆಳೆ ಖರೀದಿಸಿ ಪಟ್ಟಣ ಪ್ರದೇಶದಲ್ಲಿ ನ್ಯಾಯವಾದ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು.
ಸಣ್ಣ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ನೀಡಬೇಕು, ಎಪಿಎಂಸಿ ಕಾಯಿದೆ ತಿದ್ದುಪಡಿಯನ್ನು ರದ್ದು ಮಾಡಬೇಕು, ಸಣ್ಣ ಮಧ್ಯಮ ವ್ಯಾಪಾರಿಗಳು ವೃತ್ತಿ ಸಂಬಂಧ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಬೇಕು, ವ್ಯಾಪಾರಕ್ಕೆ ಸಹಾಯಕವಾಗಲು ಕಡಿಮೆ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಕೊಡಬೇಕು, ವಿದ್ಯುತ್ ಉತ್ಪಾದನೆ, ವಿತರಣೆಯನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು, ದುಡಿಯುವ ರಂಗದಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು, ಕೃಷಿ ಭೂಮಿಯನ್ನು ಯಾರು ಬೇಕಾದರೂ ಕೊಂಡುಕೊಳ್ಳಬಹುದೆಂಬ ತಿದ್ದುಪಡಿಯನ್ನು ಹಿಂಪಡೆಯಬೇಕು, ಪ್ರತಿ ವ್ಯಕ್ತಿಗೆ ತಿಂಗಳೊಂದಕ್ಕೆ 10 ಕೆ.ಜಿ.ಯಂತೆ ಆರು ತಿಂಗಳವರೆಗೆ ಉಚಿತ ಆಹಾರಧಾನ್ಯ ವಿತರಿಸಬೇಕು, ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್‍ಗಳು, ಅಗತ್ಯ ವಸ್ತುಗಳ ತೀವ್ರ ಕೊರತೆ ಇದ್ದು, ಅವುಗಳನ್ನು ಗರಿಷ್ಟ ಪ್ರಮಾಣದಲ್ಲಿ ಕೇಂದ್ರ ಪೂರೈಸಬೇಕು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ವರ್ಷದಲ್ಲಿ ಕನಿಷ್ಟ 200 ದಿನಗಳ ಉದ್ಯೋಗ ನೀಡಬೇಕು ಮತ್ತು ನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಕ್ಷದ ಸಹ ಕಾರ್ಯದರ್ಶಿ ಪಿ.ಆರ್.ಭರತ್, ಖಜಾಂಚಿ ಎ.ಸಿ.ಸಾಬು, ಪದಾಧಿಕಾರಿಗಳಾದ ಎನ್.ಡಿ.ಕುಟ್ಟಪ್ಪ, ಮಹದೇವು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.