ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮನವಿ

June 16, 2020

ಮಡಿಕೇರಿ ಜೂ.16 : ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭ ಜಿಲ್ಲಾಧಿಕಾರಿಗಳ ಗಮನ ಸೆಳೆದ ವೇದಿಕೆಯ ಅಧ್ಯಕ್ಷ ರವಿ ಗೌಡ, ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯಿಂದ ಕೊಡಗು ಜಿಲ್ಲೆಯಾದ್ಯಂತ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳ ವಿರುದ್ಧ ನಗರಸಭೆಗೆ ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿರುವ ಇಂತಹ ಹೋಂಸ್ಟೇಗಳಲ್ಲಿ ಸಿಸಿ ಕ್ಯಾಮರಾ ಸೇರಿದಂತೆ ಯಾವುದೇ ಸೂಕ್ತ ಭದ್ರತೆ ಇಲ್ಲ. ಈಗಾಗಲೇ ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭ ಕೆಲ ಹೋಂಸ್ಟೇಗಳಲ್ಲಿ ಸ್ಯಾನಿಟರಿ, ಮಾಸ್ಕ್ ಸೇರಿದಂತೆ ಯಾವುದೇ ಸುರಕ್ಷತೆ ಇರುವುದಿಲ್ಲ. ಇದೇ ಸಂದರ್ಭ ಬೇರೆ ಜಿಲ್ಲೆಗಳಿಂದ ಪ್ರವಾಸಿಗರು ಕೊಡಗಿಗೆ ಆಗಮಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಮಡಿಕೇರಿ ನಗರಕ್ಕೆ ಆಗಮಿಸುವ ಕೆಲವು ಪ್ರವಾಸಿಗರನ್ನು ಹೋಂಸ್ಟೇ ದಲ್ಲಾಳಿಗಳು ಒತ್ತಾಯ ಪೂರ್ವಕವಾಗಿ ತಮ್ಮ ಹೋಂಸ್ಟೇಗಳಿಗೆ ಕರೆದುಕೊಳ್ಳುತ್ತಿರುವ ಬಗ್ಗೆ ಹಾಗೂ ತೆಲುಗು ಹೋಂಸ್ಟೇಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಮನವಿ ಪತ್ರ ನೀಡುವ ಸಂದರ್ಭ ಹಿತರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ನಾಗೇಶ್, ಲಿಲ್ಲಿ, ನವೀನಕುಮಾರಿ ಹಾಜರಿದ್ದರು.