ಮಡಿಕೇರಿಯಲ್ಲಿ ಕೊರೊನಾ ಸೈನಿಕರಿಗೆ ಅಭಿನಂದನೆ ಸಲ್ಲಿಕೆ

17/06/2020

ಮಡಿಕೇರಿ ಜೂ.16 : ಇತ್ತೀಚೆಗೆ ಮಡಿಕೇರಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಕೋವಿಡ್-19 ನಿಯಂತ್ರಣ ಸಂಬಂಧ ಅವಿರತ ಶ್ರಮಿಸುತ್ತಿರುವ ಗ್ರಾಮ ಮಟ್ಟದ ಕೋವಿಡ್ ಸೈನಿಕರಿಗೆ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಗ್ರಾಮ ಮಟ್ಟದಲ್ಲಿ ಸ್ವಚ್ಛತಾ ಕಾರ್ಯದಿಂದ ಮೊದಲಾಗಿ, ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರ ಮಾಹಿತಿ ಸಂಗ್ರಹ, ಕ್ವಾರನ್‍ಟೈನ್ ಇದ್ದವರ ನಿಗಾ, ಸಾಂಸ್ಥಿಕ ಕ್ವಾರನ್‍ಟೈನ್ ನಲ್ಲಿ ನಿಗಾವಹಿಸುವುದು, ಪ್ರತಿದಿನ ಮನೆ ಮನೆ ತೆರಳಿ ಆರೋಗ್ಯ ವಿಚಾರಿಸುವುದು, ವಲಸೆ ಕಾರ್ಮಿಕರನ್ನು (ಹೊರಜಿಲ್ಲೆ / ರಾಜ್ಯಗಳಿಗೆ) ಅವರ ಊರಿಗೆ ಕಳುಹಿಸುವ ವ್ಯವಸ್ಥೆ, ರೇಷನ್ ಕಾರ್ಡ್ ಇಲ್ಲದ ಜನರಿಗೆ ಆಹಾರ ಸಾಮಗ್ರಿ ಪೂರೈಕೆ, ಇವೇ ಮೊದಲಾದ ಕಾರ್ಯಗಳನ್ನು ಮಾಡಿದ ಗ್ರಾಮ ಟಾಸ್ಕ್ ಪೋರ್ಸ್ ಕೋವಿಡ್ ಸೈನಿಕರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಕಂದಾಯ ನಿರೀಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿಗಳು, ಪಂಚಾಯತ್ ರಾಜ್ ಇಲಾಖೆಯ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳೆಲ್ಲರಿಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕೊರೊನಾ ಸೈನಿಕರನ್ನು ಅಭಿನಂದಿಸಿ ಮಾತನಾಡಿ ನಿಜವಾಗಿಯು ತಳಮಟ್ಟದಿಂದ ಕೋವಿಡ್-19 ನಿಯಂತ್ರಣ ಸಂಬಂಧ ಕಾರ್ಯ ನಿರ್ವಹಿಸಿದ ಎಲ್ಲಾ ಇಲಾಖೆಯ ಸಿಬ್ಬಂದಿಗಳನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಮುಂದೆಯೂ ಕೊಡಗಿನಲ್ಲಿ ಇದೇ ರೀತಿ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸೋಣ ಎಂದು ಹೇಳುತ್ತ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಇಒ ಪಿ.ಲಕ್ಷ್ಮೀ, ತಹಶೀಲ್ದಾರ್ ಮಹೇಶ್, ತಾಲ್ಲೂಕು ಆರೋಗ್ಯಧಿಕಾರಿ ಗೋಪಿನಾಥ್, ಸಿಡಿಪಿಒ ಅರುಂಧತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್, ತಾಲ್ಲೂಕು ಬಿಸಿಎಂ ಅಧಿಕಾರಿ ಕವಿತಾ, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಉಚಿತ ಆಹಾರ ಕಿಟ್ ವಿತರಣೆಯನ್ನು ಉತ್ತಮವಾಗಿ ನಿರ್ವಹಿಸಿದ ತಾಲ್ಲೂಕು ಕಚೇರಿ ಪ್ರ.ದ.ಸ. ಉಮೇಶ್, ಸಾಂಸ್ಥಿಕ ತಡೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಕವಿತ, ಹೊರ ರಾಜ್ಯದ ಕಾರ್ಮಿಕರನ್ನು ವ್ಯವಸ್ಥಿತವಾಗಿ ಕಳುಹಿಸಲು ಸಹಕರಿಸಿದ ಮೇಕೇರಿ ಕರವಸೂಲಿಗಾರ ಶ್ರೇಯಸ್, ಶಂಕಿತರ ಗಂಟಲು-ಮೂಗಿನ ದ್ರವ ತೆಗೆದ (1000 ಕ್ಕೂ ಅಧಿಕ) ಪ್ರಯೋಗಾಲಯ ತಂತ್ರಜ್ಞ ಸಚಿನ್ ಇವರುಗಳನ್ನು ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.