ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿಯಲ್ಲಿ ಅಧಿಕ ತೆರಿಗೆ ವಸೂಲಿ ಆರೋಪ : ಸಿಪಿಐಎಂ ನಿಂದ ಪ್ರತಿಭಟನೆಯ ಎಚ್ಚರಿಕೆ

17/06/2020

ಸಿದ್ದಾಪುರ ಜೂ. 17 : ಕೊರೋನಾ ವೈರಸ್ ಹರಡುವಿಕೆ ಹಾಗೂ ಮಹಾಮಳೆಯಿಂದ ಗ್ರಾಮದ ನಿವಾಸಿಗಳು ಸಂಕಷ್ಟದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ವಂದಿಸಬೇಕಾದ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಸಾರ್ವಜನಿಕರಿಂದ ಅಧಿಕ ತೆರಿಗೆ ವಸೂಲಿ ಮಾಡುವ ಕ್ರಮವನ್ನು ಕೈ ಬಿಡದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನೆಲ್ಯಹುದಿಕೇರಿ ಸಿಪಿಐಎಂ ಗ್ರಾಮ ಸಮಿತಿ ಕಾರ್ಯದರ್ಶಿ ಪಿ.ಆರ್ ಭರತ್ ಎಚ್ಚರಿಸಿದ್ದಾರೆ.
ನೆಲ್ಯಹುದಿಕೇರಿ ಗ್ರಾಮದಲ್ಲಿ ಸಾವಿರಾರು ಕಾರ್ಮಿಕರು ಸೇರಿದಂತೆ ಕಡುಬಡವರಾಗಿದ್ದು, ಕೆಲಸ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಎರಡು ಬಾರಿ ಪ್ರವಾಹ ಸಂದರ್ಭದಲ್ಲಿ ಮನೆ ಆಸ್ತಿ ಪಾಸ್ತಿ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಬಹುತೇಕ ಕಾರ್ಮಿಕ ಕುಟುಂಬಗಳಿಗೆ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಗ್ರಾಮ ಪಂಚಾಯಿತಿ ಅಧಿಕ ತೆರಿಗೆ ವಸೂಲಿ ಮಾಡಲು ಮುಂದಾಗಿರುವುದು ಸರಿಯದ ಕ್ರಮವಲ್ಲ ಎಂದರು.
ಗ್ರಾಮ ಪಂಚಾಯಿತಿಗೆ ವಿವಿಧ ಸೌಲಭ್ಯಕ್ಕೆ ತೆರಳುವ ಜನರಿಂದ ಕಡ್ಡಾಯವಾಗಿ ತೆರಿಗೆಕಟ್ಟಬೇಕೆಂದು ಒತ್ತಾಯ ಮಾಡುತ್ತಿರುವ ಕ್ರಮ ಖಂಡನೀಯ ಎಂದರು.
ಕಂದಾಯ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ವಾರ್ಡ್ ಹಾಗೂ ಗ್ರಾಮ ಸಭೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಪಿಡಿಒ ಅನಿಲ್ ಕುಮಾರ್ ಪರಿಷ್ಕøತ ಕಂದಾಯ ಬಲವಂತ ವಸೂಲಾತಿ ಮಾಡುತ್ತಿದ್ದು ಇದನ್ನು ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ.
ಅಂಗಡಿ ಲೈಸನ್ಸ್ ಮನ ಬಂದಂತೆ ಏರಿಕೆ ಮಾಡುತ್ತಿದ್ದು, ಸಣ್ಣ ವ್ಯಾಪಾರಿಗಳಿಂದ 3ಸಾವಿರ ರೂ. ಪಾವತಿಸುವಂತೆ ಒತ್ತಾಯ ಹೇರಲಾಗುತ್ತಿದೆ. ನೆಲ್ಯಹುದಿಕೇರಿ ಗ್ರಾಮವು ಕಳೆದ ಎರಡು ವರ್ಷದಿಂದ ಪ್ರಾಕೃತಿಕ ವಿಕೋಪದಿಂದ ನಲುಗಿದ್ದು, ಜನ ನಜೀವನ ತತ್ತರಿಸಿದೆ. ಇದೀಗ ಕೊರೋನಾ ಲಾಕ್‍ಡೌನ್ ನಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಪಂಚಾಯಿತಿಯ ಪಿಡಿಒ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವದನ್ನು ಕೈಬಿಟ್ಟು
ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ. ಗ್ರಾ. ಪಂ. ಮುಂದೆ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೆಲ್ಯಹುದಿಕೇರಿ ಘಟಕ ಸದಸ್ಯ ಜೋಸ್ ಇದ್ದರು.