ಅಶೋಕ ವೃಕ್ಷ ಔಷಧೀಯಗುಣಗಳಿಗೆ ಹೆಸರುವಾಸಿ

17/06/2020

ಅಶೋಕ’ ಒಂದು ಮಧ್ಯಮ ಗಾತ್ರದ ನಿತ್ಯ ಹಸುರಿನ ಸುಂದರವಾದ ಮರ. ಅಶೋಕ ನಿಧಾನವಾಗಿ ಬೆಳೆಯುವ ನಿತ್ಯ ಹಸುರಿನ ಸಣ್ಣಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲ ಗೊಂಚಲ ಹೂಗಳ ಗೊಂಚಲುಗಳು, ಮನಸ್ಸಿಗೆ ಮುದನೀಡುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ಹತ್ತು ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಸಮುದ್ರಮಟ್ಟದಿಂದ ೨-೩ ಸಾವಿರ ಅಡಿ ಎತ್ತರದ ಪೂರ್ವ, ಈಶಾನ್ಯ ಭಾರತದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಕರ್ಣಾಟಕದಲ್ಲೂ ಇದು ವಿಶೇಷವಾಗಿ ಕಾಣಬರುವ ಸಸ್ಯರಾಶಿ.

ಇತಿಹಾಸ :

Saraca Indica ಎಂಬ ಸಸ್ಯಶಾಸ್ತ್ರದ ಹೆಸರನ್ನು ಗಳಿಸಿರುವ ಅಶೋಕ abaceae, ಕುಟುಂಬವರ್ಗಕ್ಕೆ ಸೇರಿದೆ. ಹೆಸರೇ ಹೇಳುವಂತೆ, ಅಶೋಕಎಂದರೆ ಶೋಕವಿಲ್ಲದ್ದು ಎಂದರ್ಥ. ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಏಕೆಂದರೆ, ಅಶೋಕ ಮರದ ಜೊತೆಗೆ ಅನೇಕ ದಂತಕಥೆಗಳೂ, ಪುರಾಣಕಥೆಗಳೂ, ಸೇರಿಕೊಂಡಿವೆ. ನಮ್ಮ ರಾಮಾಯಣದ ಸೀತಾಮಾತೆಯನ್ನು ರಾವಣನು ಅಶೋಕವಾಟಿಕೆಯಲ್ಲಿ ಇರಿಸಿದ್ದನಂತೆ. ಅಶೋಕದ ಹೂಗಳು ಅರಳುವ ಪರಿ ಅತಿ ಮೋಹಕ. ಮರದತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ೪ ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯದಿನ ಹಳದಂತೆ ಕಡುಕೆಂಪುಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ, ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಮೂಗಿನಮೇಲೆ ಬೆರಳಿದುವಂತೆ ಮಾಡುವುದು ಸಹಜ. ಹೂಗಳಲ್ಲಿ ಸುಗಂಧದ ನಸುಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯವೇಳೆ ಬಂದಂತೆ, ಆ ಪರಿಮಳಗಾಢವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು. ‘ಗೌತಮ ಬುದ್ಧದೇವ’ ನು ‘ಅಶೋಕವನ’ ದಲ್ಲಿ ಜನ್ಮಿಸಿದನೆಂದು ಪ್ರತೀತಿ ಇದೆ.ಹಾಗಾಗಿ ಬೌದ್ಧವಿಹಾರಗಳಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ. ಕಾಮದೇವನಿಗೆ ಈ ಮರವನ್ನು ಕಂಡರೆ ಪ್ರಾಣವಂತೆ. ಇದು ಪುರಾಣಗಳಲ್ಲಿ ಅಲ್ಲಿ ಇಲ್ಲಿ ತಿಳಿಸಿರುವ ಮಾತು.

ಔಷಧೀಯಗುಣಗಳಿಗೆ ಅಶೋಕ ಹೇಳಿಮಾಡಿಸಿದಂತೆ :

ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳು ಒಣಗಿಸಿ, ತೊಗಟೆಯನ್ನು ಪುಡಿಮಾಡಿ, ಬಳಸುತ್ತಾರೆ. ‘ಅಶೋಕಾರಿಷ್ಟ’, ‘ಅಶೋಕಘೃತ’ ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ಬಂಗಾಲ ಹೆಣ್ಣುಮಕ್ಕಳು, ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರಂತೆ. ತೊಗಟೆಯಲ್ಲಿ “ಟ್ಯಾನಿನ್,” ಅಂಶವಿದೆ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚುವರಿ ಬರುವುದಂತೆ. ನಾವು ಈಗ ಅಲಂಕಾರಿಕವಾಗಿ ಬೆಳೆಸುವ ಎತ್ತರದ ಅಶೋಕ ಎಂದು ಹೆಸರಿಸುವ ಮರದಲ್ಲಿ ಒಂದು ಹೂ ಕಾಣಿಸುವುದಿಲ್ಲ. ಇದು ಅಶೋಕದ ಒಂದು ಜಾತಿ ಅಷ್ಟೆ.