ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಕೊಡಗಿನ ಭತ್ತದ ರಾಶಿ ಬೆಟ್ಟ

17/06/2020

ಕೊಡಗಿನವರು ಪ್ರಕೃತಿ ಆರಾಧಕರು ಇಲ್ಲಿನ ಬೆಟ್ಟಗುಡ್ಡ, ನದಿ ಎಲ್ಲವನ್ನೂ ಪೂಜ್ಯಭಾವದಿಂದ ಕಾಣುತ್ತಾರೆ. ಹಾಗಾಗಿಯೇ ಇಂದಿಗೂ ಇಲ್ಲಿ ಹಲವು ವೈಶಿಷ್ಟ್ಯತೆಯನ್ನು ನಾವು ಕಾಣಬಹುದು. ಇನ್ನು ಕೊಡಗಿಗೊಂದು ಸುತ್ತು ಹೊಡೆದರೆ ಹಲವು ಬೆಟ್ಟಗಳು ನಮಗೆ ಕಾಣಸಿಗುತ್ತವೆ. ಈ ಬೆಟ್ಟಗಳು ಒಂದಕ್ಕಿಂತ ಮತ್ತೊಂದು ತನ್ನದೇ ಆದ ಚೆಲುವು ಮತ್ತು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತವೆ. ಇಲ್ಲಿನ ಪ್ರತಿಯೊಂದು ಬೆಟ್ಟಕ್ಕೂ ಹಿರಿಯರು ಮಹತ್ವ ನೀಡಿದ್ದು, ಆ ಬೆಟ್ಟಗಳನ್ನು ಪೂಜ್ಯಭಾವನೆಯಿಂದ ಕಾಣುತ್ತಾರೆ. ಇಂತಹ ಬೆಟ್ಟಗಳ ನಡುವೆ ಸೋಮವಾರಪೇಟೆ ತಾಲೂಕಿನಲ್ಲಿರುವ ಭತ್ತದ ರಾಶಿ ಬೆಟ್ಟವೂ ಒಂದು. ಈ ಬೆಟ್ಟವು ತನ್ನದೇ ಚೆಲುವನ್ನು ಹೊಂದಿದ್ದು ನಿಸರ್ಗಪ್ರೇಮಿಗಳನ್ನು ತನ್ನತ್ತ ಚುಂಬಕದಂತೆ ಸೆಳೆಯುತ್ತದೆ. ಚಾರಣಪ್ರಿಯರಿಗೆ ಮುದ ನೀಡುವ ಭತ್ತದರಾಶಿ ಬೆಟ್ಟವು ಸೋಮವಾರಪೇಟೆಯಿಂದ ಸುಮಾರು 15 ಕಿ.ಮೀ.ದೂರದಲ್ಲಿರುವ ಸಿಂಗನಳ್ಳಿ ಗ್ರಾಮಕ್ಕೆ ಸೇರಿದೆ.

ಭತ್ತದರಾಶಿ ಬೆಟ್ಟ ಹೆಸರು ಬಂದಿದ್ದು ಹೇಗೆ? : ಈ ಬೆಟ್ಟದ ಹೆಸರು ಕೇಳಿದರೆ ಇದೇನಪ್ಪಾ ಭತ್ತದರಾಶಿ ಬೆಟ್ಟ ಆಶ್ಚರ್ಯವಾಗಬಹುದು. ಇಂತಹವೊಂದು ಹೆಸರು ಬೆಟ್ಟಕ್ಕೆ ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಗ್ರಾಮದವರು ದಂತಕಥೆ ಮೂಲಕ ಬೆಟ್ಟಕ್ಕೆ ಬಂದ ಹೆಸರನ್ನು ವಿವರಿಸುತ್ತಾರೆ. ಬಹುಶಃ ಬೇಸಿಗೆಯಲ್ಲಿ ಈ ಬೆಟ್ಟವನ್ನು ದೂರದಿಂದ ನೋಡಿದವರು ಭತ್ತದರಾಶಿ ಬೆಟ್ಟ ಎಂದು ಹೆಸರಿಟ್ಟಿರಬೇಕು. ಏಕೆಂದರೆ ಬೇಸಿಗೆಯಲ್ಲಿ ಬೆಟ್ಟದ ಮೇಲಿರುವ ಹುಲ್ಲು ಒಣಗಿ ಭತ್ತದ ರಾಶಿ ಮಾಡಿಟ್ಟಂತೆ ಕಾಣುತ್ತದೆ. ಇದು ಬೆಟ್ಟಕ್ಕೆ ಹೆಸರು ಬರಲು ಕಾರಣವಾಗಿರಬಹುದು.

ದಂತಕಥೆಯ ಪ್ರಕಾರ, ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಮೂಲಾಧಾರವಾಗಿತ್ತು. ಭತ್ತವನ್ನು ಹೆಚ್ಚು ಯಾರು ಬೆಳೆಯುತ್ತಾರೋ ಅವರಿಗೆ ಗೌರವ ನೀಡಲಾಗುತ್ತಿತ್ತು. ತಾವು ಬೆಳೆದ ಭತ್ತವನ್ನು ರಾಶಿ ಮಾಡುವಾಗ ಆಗುವ ಸಂಭ್ರಮವೇ ಬೇರೆ. ಹಿಂದೆ ಈ ಊರಿನಲ್ಲಿದ್ದ ರೈತನೊಬ್ಬನಿಗೆ ಮುಗಿಲೆತ್ತರಕ್ಕೆ ಭತ್ತದ ರಾಶಿ ಮಾಡಬೇಕೆಂಬ ಹಂಬಲ ಹುಟ್ಟಿತು. ಹೀಗಾಗಿ ತಾನು ಬೆಳೆದ ಭತ್ತವಲ್ಲದೆ, ಗ್ರಾಮದವರು ತಂದು ಸುರಿಯುವಂತೆ ಅಜ್ಞಾಪಿಸಿದನು. ಇವನ ಮಾತನ್ನು ತಳ್ಳಿಹಾಕಲಾಗದ ನೆಂಟರು, ಗ್ರಾಮದವರು ತಮ್ಮ ಬಳಿಯಿದ್ದ ಭತ್ತವನ್ನು ತಂದು ಹಾಕಿದರು. ಹೀಗೆ ಪ್ರತಿವರ್ಷವೂ ಈತ ಮಾಡತೊಡಗಿದನು. ಈತನ ಹುಚ್ಚಾಟ ನೋಡಿದ ಆತನ ಸಹೋದರಿಗೆ ಕೋಪಬಂತು. ಆಕೆ ‘ನಿನ್ನ ಭತ್ತದ ರಾಶಿಗೆ ಬೆಂಕಿಬೀಳಲಿ, ಅಲ್ಲಿ ಹುಲ್ಲುಗಳು ಬೆಳೆಯಲಿ’ ಎಂದು ಶಾಪ ನೀಡಿದಳು. ಪರಿಣಾಮ ಭತ್ತದ ರಾಶಿ ನಾಶವಾಗಿ ಅದು ಬೆಟ್ಟವಾಗಿ ಅಲ್ಲಿ ಹುಲ್ಲು ಕುರುಚಲು ಗಿಡಗಳು ಬೆಳೆದವಂತೆ.

ಇನ್ನು ಕೆಲವರು ಹೇಳುವ ಪ್ರಕಾರ, ಮೊದಲು ಈ ಬೆಟ್ಟಕ್ಕೆ ಮುಗಿಲು ತಾಕುತ್ತಿತ್ತಂತೆ. ಒಬ್ಬಳು ಭತ್ತ ಕುಟ್ಟುವಾಗ ಒನಕೆ ತಾಗಿ ಮೇಲಕ್ಕೆ ಹೋಗಿಬಿಟ್ಟಿತ್ತಂತೆ. ಹೀಗೆ ಏನೇನೋ ಕಥೆಗಳ ಮಹಾಪೂರವೇ ಇಲ್ಲಿನವರ ಬಾಯಿಯಿಂದ ಪುಂಖಾನುಪುಂಖವಾಗಿ ಹೊರಬರುತ್ತದೆ. ಈ ಕಥೆಗಳು ಏನೇ ಇರಲಿ, ಈ ಬೆಟ್ಟ ತನ್ನ ಸೌಂದರ್ಯವನ್ನು ಮಾತ್ರ ಕಳೆದುಕೊಂಡಿಲ್ಲ.

ಚಾರಣಪ್ರಿಯರ ಸ್ವರ್ಗ : ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಗೆ ಸೇರಿದ ಸಿಂಗನಳ್ಳಿ ಕುಗ್ರಾಮ. ಇಲ್ಲಿನವರದು ಕೃಷಿಯಿಂದಲೇ ಬದುಕು. ಮಳೆಗಾಲದಲ್ಲಿ ಮಳೆ ಸುರಿದಾಗ ಈ ಬೆಟ್ಟದತ್ತ ಹೋಗುವುದು ಸಾಧ್ಯವಾಗದ ಕೆಲಸ. ಜಿಗಣೆಗಳು ಹುಟ್ಟಿಕೊಳ್ಳುತ್ತವೆ. ಅಕ್ಟೋಬರ್ ನಂತರದ ದಿನಗಳು ಚಾರಣಪ್ರಿಯರಿಗೆ ಈ ತಾಣ ಮುದ ನೀಡುತ್ತವೆ.

ಹೋಗುವುದು ಹೇಗೆ? : ಸಿಂಗನಹಳ್ಳಿ ತಲುಪಿ ಗ್ರಾಮದ ತಳದಿಂದ ಬೆಟ್ಟವನ್ನೇರುತ್ತಾ ಹೋದಂತೆ ನಿಸರ್ಗದ ನಡುವಿನ ಚೆಲುವು ಬೆಟ್ಟವನ್ನೇರಲು ಪ್ರೇರೇಪಿಸುತ್ತದೆ. ಇತರೆ ಬೆಟ್ಟಗಳಿಗೆ ಹೋಲಿಸಿದರೆ ಇಲ್ಲಿ ಚಾರಣ ಕಷ್ಟವೇನಲ್ಲ. ಏರುತ್ತಾ ಹೋದಂತೆ ಬೆಟ್ಟದ ಮೇಲ್ಭಾಗದಲ್ಲಿ ಸಿಗುವ ವಿಶಾಲವಾದ ಮೈದಾನದಂತಹ ಪ್ರದೇಶ ಗಮನಸೆಳೆಯುತ್ತದೆ. ಇಲ್ಲಿಂದ ನಿಂತು ಕಣ್ಣುಹಾಯಿಸಿದರೆ ಪ್ರಕೃತಿಯ ಚೆಲುವಿನ ನೋಟ ಒಂದು ಕ್ಷಣ ನಮ್ಮನ್ನು ಮೈಮರೆಸಿಬಿಡುತ್ತದೆ. ಪುಷ್ಪಗಿರಿ ಬೆಟ್ಟದ ತಪ್ಪಲು, ಮಾದಾಪುರ ಸಮೀಪದ ಕೋಟೆ ಬೆಟ್ಟ, ಮಾಲಂಬಿ ಬೆಟ್ಟ, ಕಾಟಿಕಲ್ಲು ಬೆಟ್ಟ, ಚೌಡ್ಲು ಬೆಟ್ಟ, ಮೂಕ್ರಿ ಗುಡ್ಡ, ಮಕ್ಕಳ ಗುಡಿ ಬೆಟ್ಟ, ದೊಡ್ಡಕಲ್ಲು ಬೆಟ್ಟ, ಹಾರಂಗಿ ಜಲಾಶಯ, ಹೇಮಾವತಿ ಜಲಾಶಯದ ಹಿನ್ನೀರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಪರ್ವತ ಶ್ರೇಣಿಗಳ ಸುಂದರ ನೋಟಗಳು ಲಭ್ಯವಾಗುತ್ತವೆ.

ದುರ್ಗಮವಲ್ಲದ ಸುಲಭ ಹಾದಿಯ ಈ ಬೆಟ್ಟಕ್ಕೆ ಯಾರು ಬೇಕಾದರು ಚಾರಣಕ್ಕೆ ತೆರಳಬಹುದಾಗಿದೆ. ಆದರೆ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೋಗುವುದು ಕ್ಷೇಮಕರ. ಹಾಗೆಯೆ, ಹೋಗುವಾಗ ಒಂದಿಷ್ಟು ತಿಂಡಿತಿನಿಸುಗಳನ್ನು ಪೊಟ್ಟಣಕಟ್ಟಿ ಒಯ್ಯುವುದೂ ಉತ್ತಮ. ಮಳೆಗಾಲ ಮುಗಿದ ಮೇಲೆ ಒಂದು ಕೈ ನೋಡೇಬಿಡಿ.