ಕಾಫಿ ಕಾಯಿಗಳ ಉದುರುವಿಕೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು

17/06/2020

ಮಡಿಕೇರಿ ಜೂ.17 : ನೈರುತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದ್ದು ಹವಾಮಾನ ಇಲಾಖೆ ವರದಿಯ ಪ್ರಕಾರ ಈ ವರ್ಷವು ಸಹ ನೈರುತ್ಯ ಮುಂಗಾರು ಮಳೆ ಪ್ರದೇಶಗಳಲ್ಲಿ ಸಾಮಾನ್ಯದಿಂದ ಅತೀ ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುತ್ತದೆ. ಅತೀ ಹೆಚ್ಚಿನ ಮಳೆಯಿಂದಾಗಿ ಕಾಫಿ ಗಿಡಗಳ ಬೇರುಗಳ ವಲಯದಲ್ಲಿ ನೀರು ನಿಂತು, ತೀವ್ರ ತೇವಾಂಶ ಉಂಟಾಗುತ್ತದೆ. ಇಂತಹ ಪ್ರತೀಕೂಲ ವಾತಾವರಣವು, ಅದರಲ್ಲೂ ರೋಬಸ್ಟಾ ಕಾಫಿಯಲ್ಲಿ ಕೊಳೆ ರೋಗ, ತೊಟ್ಟು ಕರಗುವ ರೋಗ ಮತ್ತು ಕಾಯಿ ಕರಗುವ ರೋಗಗಳ ಸ್ಪೋಟಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಹಾರ್ಮೋನುಗಳ ಅಸಮತೋಲನದಿಂದುಟಾಗುವ, ಕಾಫಿ ಕಾಯಿಗಳ ಉದುರುವಿಕೆಯನ್ನು ತಡೆಗಟ್ಟಲು ಕಾಫಿ ಬೆಳೆಗಾರರು ಕೆಲವು ಕ್ರಮಗಳನ್ನು ಅನುಸರಿಸಲು ಈ ಮೂಲಕ ತಿಳಿಸಲಾಗಿದೆ.
ಕಾಫಿ ಗಿಡ ಕಸಿ, ನೆತ್ತಿ ಬಿಡಿಸುವುದು ಮತ್ತು ಕಂಬ ಚಿಗುರು ತೆಗೆಯುವುದರಿಂದ ಸರಿಯಾಗಿ ಗಾಳಿ ಮತ್ತು ಬೆಳಕು ಫಸರಿಸಲು ಅನುಕೂಲವಾಗುತ್ತದೆ. ಕೊಳೆ ರೋಗ ಕಂಡು ಬರುವ ಅರೇಬಿಕಾ ಮತ್ತು ರೋಬಸ್ಟಾ ಜಾಗಗಳಲ್ಲಿ, ಶೇ.1 ಬೋರ್ಡೊ ದ್ರಾವಣದೊಂದಿಗೆ 50 ಮಿಲಿ ಪ್ಲಾನೋಫಿಕ್ಸ್ ಅನ್ನು ಪ್ರತೀ ಬ್ಯಾರೆಲ್‍ಗೆ (200 ಲೀಟರ್) ಬೆರೆಸಿ ಸಿಂಪಡಿಸುವುದರಿಂದ ಅಕಾಲಿಕ ಕಾಯಿ ಉದುರುವಿಕೆಯನ್ನು ಮತ್ತು ಕೊಳೆ ರೋಗವನ್ನು ತಡೆಗಟ್ಟಬಹುದಾಗಿರುತ್ತದೆ. (ಪ್ರಕಾಶಮಾನವಾದ ಹವಮಾನದಲ್ಲಿ ಕೈಗೊಳ್ಳುವುದು) ಸರಾಗವಾಗಿ ನೀರು ಹರಿಯಲು ಮತ್ತು ಬಸಿದು ಹೋಗಲು ನೀರಿನ ಕಾಲುವೆಗಳನ್ನು ಮತ್ತು ತೊಟ್ಟಿಲು ಗುಂಡಿಗಳನ್ನು ಸ್ವಚ್ಛಗೊಳಿಸುವುದು. ಬಿದ್ದ ಎಲೆ ಮತ್ತು ತರಗುಗಳನ್ನು ನಾಲ್ಕು ಕಾಫಿ ಗಿಡಗಳ ಮಧ್ಯೆ ಗುಡಿಸಿ ರಾಶಿ ಮಾಡುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಗಳನ್ನು ಅಥವಾ ಚೆಟ್ಟಳ್ಳಿ ಕಾಫಿ ಉಪ ಸಂಶೋಧನ ಕೇಂದ್ರವನ್ನು ಸಂಪರ್ಕಿಸುವಂತೆ ವಿರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ಕೋರಿದ್ದಾರೆ.