ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ : ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಲು ಕರೆ

17/06/2020

ಮಡಿಕೇರಿ ಜೂ. 17 : ಭಾರತದ ಗಡಿ ಪ್ರದೇಶ ಲಡಾಕ್‍ನ ಗ್ಯಾಲ್ವನ್ ಕಣಿವೆಯಲ್ಲಿ ಸೋಮವಾರ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಚೀನಾ ವಿರುದ್ಧ ಹಾಗೂ ಭಾರತೀಯ ಯೋಧರಿಗೆ ಸ್ಥೈರ್ಯ ತುಂಬುವ ಘೋಷಣೆಗಳನ್ನು ಕೂಗಿದರಲ್ಲದೆ, ಚೀನಾ ನಿರ್ಮಿತ ವಸ್ತುಗಳನ್ನು ಸುಡುವ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪತ್ರಕರ್ತ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಮಠ ಮಂದಿರ ಪ್ರಮುಖರಾದ ಚಿ. ನಾ. ಸೋಮೇಶ್ ಅವರು, ಭಾರತ-ಚೀನಾ ಗಡಿಯಲ್ಲಿ ಏನೋ ನಡೆಯಲಿದೆ ಎಂಬ ಆತಂಕ ಹಲವು ದಿನಗಳಿಂದ ದೇಶವಾಸಿಗಳಲ್ಲಿ ಮನೆ ಮಾಡಿತ್ತು. ಅದಕ್ಕೆ ಇಂಬು ಕೊಡುವಂತೆ ಸೋಮವಾರ ಚೀನಾ ಸೈನಿಕರು ವಿನಾ ಕಾರಣ ಭಾರತೀಯ ಯೋಧರ ಮೇಲೆ ಏರಿ ಬಂದಿದ್ದು, ಸುಮಾರು 20ಕ್ಕೂ ಅಧಿಕ ಯೋಧರನ್ನು ಹತ್ಯೆಗೈದಿದ್ದಾರೆ. ಆದರೆ ಇದಕ್ಕೆ ಪ್ರತಿಕಾರವಾಗಿ ಭಾರತೀಯ ಯೋಧರೂ 40ಕ್ಕೂ ಅಧಿಕ ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ನುಡಿದರು.
ಕಳೆದ ಏಳೂವರೆ ದಶಕಗಳಿಂದ ದೇಶದ ರಾಜತಾಂತ್ರಿಕ ವ್ಯವಸ್ಥೆಯಲ್ಲಿನ ಲೋಪಗಳನ್ನು ಮನಗಂಡಿರುವ ಚೀನಾ ಶಾಂತಿ ಮಾತುಕತೆಯ ನಡುವೆಯೇ ವಿನಾ ಕಾರಣ ಕಾಲುಕೆರೆದು ಜಗಳಕ್ಕೆ ನಿಲ್ಲುತ್ತಿದೆ. ಆದರೆ ಇಂದು ಭಾರತದ ಆಡಳಿತ ವ್ಯವಸ್ಥೆ 1962 ಹಾಗೂ 1975ರಂತಿಲ್ಲ. ಇಂದು ಭಾರತೀಯ ಸೇನೆಯ ಯೋಧರು ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ವಿರೋಧಿ ಪಡೆಯನ್ನು ಹೊಡೆದುರುಳಿಸಲು ಸನ್ನದ್ಧರಾಗಿದ್ದು, ಸೋಮವಾರದ ಘಟನೆ ಇದನ್ನು ಸಾಬೀತು ಮಾಡಿದೆ ಎಂದರು.
ಆದರೂ ಭಾರತೀಯ ಸೈನಿಕರ ಬಲಿದಾನವನ್ನು ದೇಶವಾಸಿಗಳು ವ್ಯರ್ಥವಾಗಲು ಬಿಡಬಾರದು ಎಂದು ಹೇಳಿದ ಅವರು, ಚೀನಾಕ್ಕೆ ಪ್ರಬಲ ಆರ್ಥಿಕ ಮೂಲವಾದ ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವ ಮೂಲಕ ತಕ್ಕ ಪ್ರತ್ಯುತ್ತರವನ್ನು ನೀಡಬೇಕಿದೆ ಎಂದು ಹೇಳಿದರು. ದೇಶದಲ್ಲಿರುವ ಪಾಕಿಸ್ಥಾನಿ ಹಾಗೂ ಚೀನಾ ಹಸ್ತಕರು ಈ ದೇಶದಿಂದ ತೊಲಗುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು ಎಂದು ಅವರು ಕರೆ ನೀಡಿದರು.
ಪ್ರತಿಭಟನೆಯ ಬಳಿಕ ಚೀನಾ ವಿರುದ್ಧದ ಘೋಷಣೆಗಳೊಂದಿಗೆ ನಗರಸಭೆ ಬಳಿಯ ಯುದ್ಧ ಸ್ಮಾರಕದವರೆಗೆ ತೆರಳಿದ ಸಂಘಟನೆಗಳ ಕಾರ್ಯಕರ್ತರು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸೋಮವಾರದ ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವಾರ್ಪಣೆ ಹಾಗೂ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಬಜರಂಗದಳದ ಜಿಲ್ಲಾ ಸಂಚಾಲಕ ಚೇತನ್, ವಿದ್ಯಾರ್ಥಿ ಮುಖಂಡ ವಿನಯಕುಮಾರ್, ಚರಣ್, ದುರ್ಗೇಶ್, ವಿದ್ಯಾರ್ಥಿ ಪ್ರಮುಖ್ ವಿನಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಸಾಮಾಜಿಕ ಜಾಲತಾಣದ ಕಾಳಚಂಡ ಅಪ್ಪಣ್ಣ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ನಿಕಟಪೂರ್ವ ನಗರಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಬಿ.ಕೆ.ಅರುಣ್‍ಕುಮಾರ್, ಬಿ.ಕೆ.ಜಗದೀಶ್, ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಂದ್ರ ಉಡೋತ್ ಮತ್ತಿತರರು ಭಾಗವಹಿಸಿದ್ದರು.