ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿಲ್ಲ : ಕುಂದಚೇರಿ ಸಹಕಾರ ಸಂಘ ಸ್ಪಷ್ಟನೆ

17/06/2020

ಮಡಿಕೇರಿ ಜೂ.17 : ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗೆ ರಸಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಕೆಲವರು ಮಾಡಿರುವ ಆರೋಪ ಆಧಾರ ರಹಿತವಾಗಿದ್ದು, ಸಂಘದ ಹೆಸರಿಗೆ ಮಸಿಬಳಿಯುವ ಪ್ರಯತ್ನವಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಕೀರ್ತಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಂಘದ ಆಡಳಿತ ಮಂಡಳಿ ಪರವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮತ್ತು ಚರ್ಚಿಸದೆ ರಸಗೊಬ್ಬರವನ್ನು ಖರೀದಿಯೇ ಮಾಡದವರು ಹಾಗೂ ಇವರೊಂದಿಗೆ ಖರೀದಿಸಿದ ಕೆಲವು ರೈತರು ಸೇರಿಕೊಂಡು ಏಕಾಏಕಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ಲೆಂಟೇಷನ್ ನೀಡ್ಸ್ (Plantation Needs) ರಸಗೋಬ್ಬರ ವಿತರಕರಿಂದ ಬಿಲ್ ನಲ್ಲಿ ಆದ ಕೈ ತಪ್ಪಿನ ಬರಹದಿಂದ, ಡಿ.ಎ.ಪಿ. ರಸಗೊಬ್ಬರದ ಬೆಲೆಯನ್ನು 16:16:16: 1 ಪಿಎಲ್ ಗೆ ನಮೂದಾಗಿರುತ್ತದೆ. ಹಾಗೆಯೇ 16:16:16 1ಪಿಎಲ್ ನ ಬೆಲೆಯನ್ನು ಡಿಎಪಿ ರಸಗೊಬ್ಬರದ ಬೆಲೆಗೆ ಕೈ ತಪ್ಪಿನಿಂದ ನಮೂದು ಮಾಡಲಾಗಿದೆ. ಈ ಬೆಲೆಯ ಆಧಾರದ ಮೇಲೆ ಸಂಘವು ರೈತರಿಗೆ ವಿತರಣೆ ಮಾಡಿದೆ. ಅಲ್ಲದೆ ಈಗಾಗಲೇ ರೈತರಿಗೆ ವ್ಯತ್ಯಾಸದ ಹಣವನ್ನು ಮರಳಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಷಯವನ್ನು ಸರಿಯಾಗಿ ತಿಳಿಯದೆ ಸಂಘವನ್ನು ತೇಜೋವಧೆ ಮಾಡುವುದು ಸರಿವಲ್ಲವೆಂದು ಕೆ.ಎಸ್.ಕೀರ್ತಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.