ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಬೇಡ : ಉನ್ನತ ಶಿಕ್ಷಣ ಸಚಿವರಿಗೆ ಶಾಸಕ ಬೋಪಯ್ಯ ಮನವಿ

17/06/2020

ಮಡಿಕೇರಿ ಜೂ.17 : ನಾಪೋಕ್ಲುವಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರಿಸದಂತೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

ನಾಪೋಕ್ಲು ಪ್ರಥಮ ದರ್ಜೆ ಕಾಲೇಜು 2006ರಲ್ಲಿ ಪ್ರಾರಂಭವಾಗಿದ್ದು, ಈ ಪ್ರದೇಶ ಅಲ್ಪಸಂಖ್ಯಾತರು, ಹಿಂದುಳಿದವರೇ ಹೆಚ್ಚಾಗಿರುವ ಪ್ರದೇಶವಾಗಿರುವುದರಿಂದ ವರ್ಷಕ್ಕೆ ಸರಾಸರಿ 100ರಿಂದ 150ರಷ್ಟು ವಿದ್ಯಾರ್ಥಿಗಳಿದ್ದಾರೆ. ಆದರೆ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರು ದ್ವಿತೀಯ ವರ್ಷದ ವಿದ್ಯಾಭ್ಯಾಸವನ್ನು ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದೊಂದೇ ಆಗಿದ್ದು, ಇದನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅವರು ಗಮನಸೆಳೆದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕಾಲೇಜು ಕಟ್ಟಡಗಳ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಒಟ್ಟು 10 ಎಕರೆ ಜಾಗವೂ ಇದೆ. ಮುಂದೆ ಇಲ್ಲಿ ಬೇರೆಬೇರೆ ಶೈಕ್ಷಣಿಕ ಕೋರ್ಸ್‍ಗಳನ್ನು ಆರಂಭಿಸಲು ಅವಕಾಶವಿದ್ದು, ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾಲೇಜನ್ನು ಅಲ್ಲಿಯೇ ಮುಂದುವರಿಸಲು ಆದೇಶ ಹೊರಡಿಸಬೇಕೆಂದು ಬೋಪಯ್ಯ ಅವರು ಮನವಿ ಮಾಡಿದ್ದಾರೆ.