ಕೊಡಗಿನಲ್ಲಿ ಉತ್ತಮ ಮಳೆ

17/06/2020

ಮಡಿಕೇರಿ ಜೂ.17 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಉತ್ತಮ ಮಳೆ ಸುರಿಯಲಾರಂಭಿಸಿದ್ದು, ದಟ್ಟವಾಗಿ ಕವಿಯುತ್ತಿರುವ ಮಂಜು, ಕುಳಿರ್ಗಾಳಿಯೊಂದಿಗಿನ ಹನಿಮಳೆಯನ್ನು ಹಿಂಬಾಲಿಸುವ ಬಿರುಮಳೆ ಮುಂಗಾರಿನ ಚಿತ್ರಣವನ್ನು ಅನಾವರಣಗೊಳಿಸಲಾರಂಭಿಸಿದೆ.
ದಟ್ಟವಾಗಿ ಕವಿಯುತ್ತಿರುವ ಮೋಡಗಳಿಂದ ಬಿಸಿಲು ಮರೆಯಾಗಿ, ಸುರಿಯುತ್ತಿರುವ ಮಳೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕೊಡೆ ಇಲ್ಲದೆ ಮನೆಯಿಂದ ಹೊರ ಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರೈತಾಪಿ ವರ್ಗ ಮಳೆಯ ನಡುವೆ ಕೃಷಿ ಚಟುವಟಿಕೆಗಳಲ್ಲಿ ಮಗ್ನವಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬುಧವಾರ ಬೆಳಗ್ಗಿನ ಅವಧಿಯಲ್ಲಿ ಸುರಿದ ಬಿರುಮಳೆಯ ಬಳಿಕ ದಿನಪೂರ್ತಿ ಮಂಜು ಕವಿದ ವಾತಾವರಣದೊಂದಿಗೆ ಹದವಾಗಿ ಮಳೆಯಾಗುತ್ತಿದೆ. ಜನಸಾಮಾನ್ಯರು ಪಟ್ಟಣ ವ್ಯಾಪ್ತಿಯಲ್ಲಿ ಅಗತ್ಯ ಕೆಲಸ ಕಾರ್ಯಗಳಿಗೆ ಕೊಡೆ , ರೈನ್ ಕೋಟ್‍ಗಳನ್ನು ಧರಿಸಿ ಸಂಚರಿಸುವುದು ಕಂಡು ಬರಲಾರಂಭಿಸಿದೆ.
ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದೊದು ದಿನದ ಅವಧಿಯಲ್ಲಿ ಸರಾಸರಿ ಎರಡೂವರೆ ಇಂಚು ಮಳೆಯಾಗಿದ್ದರೆ, ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗಗಳಲ್ಲಿಯೂ ಹದವಾಗಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಕೊರೊನಾದಿಂದ ಮನೆಯಲ್ಲೆ ಉಳಿದ ಮಕ್ಕಳು- ವರ್ಷಂಪ್ರತಿ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಜೂನ್ ಆರಂಭದಿಂದ ಆರಂಭಗೊಳ್ಳುವುದರೊಂದಿಗೆ, ಮುಂಗಾರಿನ ಆಗಮನವೂ ಆಗುತ್ತಿತ್ತು. ಈ ಹಂತದಲ್ಲಿ ಮ್ಕಳು ರೈನ್ ಕೋಟ್, ಕೊಡೆಗಳನ್ನು ಹಿಡಿದು ಸಂಭ್ರಮದಿಂದ ಶಾಲೆಯತ್ತ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತಾದರೆ, ಈ ಬಾರಿ ಕೊರೊನಾ ದೆಸೆಯಿಂದ ಶಾಲೆಗಳ ಆರಂಭವೇ ಅಯೋಮಯ ಸ್ಥಿತಿಯಲ್ಲಿದ್ದು, ಮಕ್ಕಳು ಮನೆಗಳಲ್ಲೆ ಉಳಿದಿದ್ದಾರೆ.ಮಳೆಯ ನಡುವಿನ ಮಕ್ಕಳ ಸಂಭ್ರಮ ಇಂದು ಮರೆಯಾಗಿದೆ.