ತಿಂಗಳು, ಎರಡು ತಿಂಗಳಿಗೊಮ್ಮೆ ಬೇಟೆ : ಬಂದು ಹೋಗುವ ಅತಿಥಿಯಿಂದ ಆತಂಕ

18/06/2020

ಮಡಿಕೇರಿ ಜೂ.18 : ಇದು ಬಂದು ಹೋಗುವ ಅತಿಥಿ, ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಮಾತ್ರ ಪ್ರತ್ಯಕ್ಷವಾಗುವ ಈ ಅತಿಥಿ ಎದುರಿಗೆ ಕಾಣಸಿಗುವ ಹಸು, ಎಮ್ಮೆ, ಕರುವನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಮರಳಿದರೆ ಮತ್ತೆ ಒಂದಷ್ಟು ದಿನ ತಿರುಗಿ ನೋಡುವುದಿಲ್ಲ.
ವಿಶೇಷವೆಂದರೆ ಕಾಫಿ ತೋಟದ ನಡುವಿನಲ್ಲೇ ಸುಳಿದಾಡುವ ಅಪರೂಪದ ಅತಿಥಿ ಇಲ್ಲಿಯವರೆಗೆ ಮಾನವರಿಗೆ ಹಾನಿ ಮಾಡಿಲ್ಲ. ಕಾರ್ಮಿಕರ ಕಣ್ಣ ಮುಂದೆಯೇ ಸುಳಿದಾಡಿದರೂ ಯಾವುದೇ ಆತಂಕ ಸೃಷ್ಟಿಸದೆ ಬೇಟೆ ಮುಗಿಸಿ ಕಾಡಿಗೆ ಸೇರುತ್ತಿದೆ ಈ ವನ್ಯಜೀವಿ.
ಹೌದು… ಕಳೆದ ಮೂರು ವರ್ಷಗಳಿಂದ ವಾಲ್ನೂರು ಗ್ರಾಮದ ಅಮ್ಮಂಗಾಲದ ಚೇನಂಡ ಪೊನ್ನಪ್ಪ ಅವರ ಟ್ರಸ್ಟ್ ಲ್ಯಾಂಡ್ ಎಸ್ಟೇಟ್‍ಗೆ ಹುಲಿರಾಯ ಬಂದು ಹೋಗುತ್ತಿದ್ದು, ಇಲ್ಲಿಯವರೆಗೆ ಅರಣ್ಯ ಅಧಿಕಾರಿಗಳಿಂದ ಇದನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಕಾರಣ ಹುಲಿ ಬರುವುದೇ ಒಂದು, ಎರಡು ತಿಂಗಳಿಗೊಮ್ಮೆ, ಬಂದರೂ ನಿಲ್ಲದೆ ಒಂದು ಬಾರಿ ಬೇಟೆಯಾಡಿ ಮರಳಿ ಬಿಡುತ್ತದೆ.
ಇದರಿಂದ ಕುತೂಹಲ ಹೆಚ್ಚಿಸಿಕೊಂಡ ಪೊನ್ನಪ್ಪ ಅವರ ಪುತ್ರ ಅಯ್ಯಪ್ಪ ಅವರು ಹುಲಿಯ ಚಲನವಲನವನ್ನು ಪತ್ತೆ ಹಚ್ಚಲು ತೋಟದ ನಡುವಿನಲ್ಲೇ ಸಿಸಿ ಕ್ಯಾಮರಾವನ್ನು ಅಳವಡಿಸಿದರು. ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ಹುಲಿ ಜೂ.14 ರಂದು ತೋಟಕ್ಕೆ ನುಸುಳಿರುವ ಸಾಕ್ಷಿ ಲಭಿಸಿದೆ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನು ಇಂದು ಪರಿಶೀಲಿಸಿದಾಗ ಮಧ್ಯರಾತ್ರಿ ಬೃಹತ್ ಗಾತ್ರದ ಹುಲಿ ಮತ್ತು ಕಾಡಾನೆಯೊಂದು ಓಡಾಡಿರುವ ದೃಶ್ಯ ಕಂಡು ಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಅನೇಕ ಬಾರಿ ಅರಣ್ಯ ಸಿಬ್ಬಂದಿಗಳು ಬಂದು ಹುಲಿ ಸೆರೆಗೆ ಪ್ರಯತ್ನಿಸಿದ್ದಾರೆ. ಆದರೆ ಅಪರೂಪದ ಅತಿಥಿ ಇಲ್ಲಿಯವರೆಗೆ ಸೆರೆಯಾಗಲೇ ಇಲ್ಲ, ಬಂದ ಹುಲಿ ಮರಳಿ ಮೀನುಕೊಲ್ಲಿ ಮೂಲಕ ದುಬಾರೆ ಅರಣ್ಯ ಸೇರಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆದರೆ ವನ್ಯಜೀವಿ ಯಾವಾಗ ಬರುವುದೋ, ಏನು ಮಾಡುವುದೋ ಎನ್ನುವ ಆತಂಕ ವಾಲ್ನೂರು, ಅಮ್ಮಂಗಾಲ ಭಾಗದಲ್ಲಿ ಮುಂದುವರೆದಿದೆ.