ಮಾಧ್ಯಮಗಳ ವಿರುದ್ಧ ಹೆಚ್‍ಡಿಕೆ ಕಿಡಿ

18/06/2020

ಬೆಂಗಳೂರು ಜೂ.18 : ನಮ್ಮ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಅದರ ಖ್ಯಾತಿಯನ್ನು ತನ್ನ ಹೆಸರಿಗೆ ಹಾಕಿಕೊಳ್ಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನದಿಂದಲೇ ಮಾತನಾಡಿದ ಅವರು, ಮಾಧ್ಯಮದವರು ತಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ಆದರೆ ದೇಶವನ್ನು ಉಳಿಸುವ ಕೆಲಸ ಮಾಡಬೇಕು. ಮಾಧ್ಯಮ ಮಿತ್ರರು ಯಾವುದೇ ಕಾರಣಕ್ಕೂ ದೇಶವನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಬಾರದು ಎಂದರು.
ಇದರಲ್ಲಿ ವರದಿಗಾರರ ತಪ್ಪು ಇಲ್ಲ, ಆದರೆ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿರುವ ಮಾಲೀಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ದೇಶವನ್ನು ಯುದ್ಧದ ವಿಷಯದಲ್ಲಿ ಹಾಳುಗೆಡವ ಬಾರದು. ನಾವು ಎಲ್ಲವನ್ನೂ ನೋಡಿ ಆಗಿದೆ. ಸರ್ಕಾರಗಳನ್ನು ಓಲೈಕೆ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಇವತ್ತಿನ ಸರ್ಕಾರದಂತೆ ಲೂಟಿ ಹೊಡೆಯುವ ಕೆಲಸ ತಾವು ಮಾಡಿಲ್ಲ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬ್ರಾಹ್ಮಣರೂ ಅಲ್ಲ, ಮಾಧ್ಯಮಗಳನ್ನು ಓಲೈಸುವ ನಾಯಕರೂ ಅಲ್ಲಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.