ಸಂಚಾರಿ ದ್ರವ ಸಂಗ್ರಹಣಾ ಘಟಕಕ್ಕೆ ಚಾಲನೆ

18/06/2020

ಮಡಿಕೇರಿ ಜೂ.18 : ಕೊಡಗು ಜಿಲ್ಲಾಡಳಿತವು ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಹೆಚ್ಚು ಗಂಟಲು/ಮೂಗು ದ್ರವ ಮಾದರಿಗಳನ್ನು ಸಂಗ್ರಹಿಸಿ ಮತ್ತು ಪರೀಕ್ಷಿಸುವ ಬಗ್ಗೆ ಗಮನ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 8,303 ರಂತೆ ಗಂಟಲು/ಮೂಗು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಗುರುವಾರ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಗೋಣಿಕೊಪ್ಪಗಳಲ್ಲಿ ಒಟ್ಟು 05 ಸಂಚಾರಿ ಗಂಟಲು/ಮೂಗು ದ್ರವ ಮಾದರಿ ಸಂಗ್ರಹಣಾ ಘಟಕಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಲಾಗಿದೆ.
ಈ ಸಂಚಾರಿ ಗಂಟಲು/ಮೂಗು ದ್ರವ ಮಾದರಿ ಸಂಗ್ರಹಣಾ ಘಟಕಗಳು ಖಾಸಗಿ ಕ್ಲಿನಿಕ್‍ಗಳಿಂದ ಬರುವ ಕರೆಗಳಿಗೆ ಸ್ಪಂದಿಸಿ, ಕ್ಲಿನಿಕ್‍ಗಳಿಗೆ ತೆರಳಿ ಗಂಟಲು/ಮೂಗು ದ್ರವ ಮಾದರಿಗಳನ್ನು ಸಂಗ್ರಹಿಸುತ್ತವೆ. ಮಾದರಿಗಳ ಸಂಗ್ರಹಣೆಯ ನಂತರ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.