ಗುತ್ತಿಗೆ ಆಧಾರದ ನೌಕರರಿಗೆ ವೇತನ ಬಿಡುಗಡೆಗೆ ಒತ್ತಾಯ

18/06/2020

ಮಡಿಕೇರಿ ಜೂ.18 : ಬಿಎಸ್‍ಎನ್‍ಎಲ್‍ಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವ ಸಂಸ್ಥೆಗಳು ತಮ್ಮ ನೌಕರರಿಗೆ ಹನ್ನೊಂದು ತಿಂಗಳ ವೇತನವನ್ನು ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಜೆ. ಜವರೇಗೌಡ, ಬಿಎಸ್‍ಎನ್‍ಎಲ್ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‍ಎನ್‍ಎಲ್ ಗುತ್ತಿಗೆದಾರ ಸಂಸ್ಥೆಗಳು ಕೊಡಗು ಜಿಲ್ಲೆಯ 150 ನೌಕರರಿಗೆ ಜುಲೈ 2019 ರಿಂದ ಮೇ 2020ರ ವರೆಗೆ ಸುಮಾರು ಹನ್ನೊಂದು ತಿಂಗಳುಗಳ ವೇತನವನ್ನು ನೀಡದೆ ಸತಾಯಿಸುತ್ತಿವೆ ಎಂದು ಆರೋಪಿಸಿದರು.
ನೌಕರರು ತಮ್ಮ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಕುಟುಂಬ ನಿರ್ವಹಣೆ ಮಾಡಲಾಗದೆ ಮತ್ತು ಸಾಲಗಾರರ ಕಾಟ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ವೇದಿಕೆಯ ಪ್ರಮುಖರು ಗುತ್ತಿಗೆದಾರರ ಸಂಸ್ಥೆಗಳಿಗೆ ತೆರಳಿ ಹಲವು ಬಾರಿ ಮನವಿ ನೀಡಿದ್ದಾರೆ. ಆದರೆ, ಹಣ ಬಿಡುಗಡೆಯಾದ ತಕ್ಷಣ ವೇತನ ನೀಡುವುದಾಗಿ ನೆಪಗಳನ್ನು ಹೇಳುತ್ತಾ ಜಾರಿಕೊಳ್ಳುತ್ತಿರುವ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಅಧಿಕಾರಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜವರೇಗೌಡ, ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ ಪರಿಹಾರ ಒದಗಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾನವೀಯ ದೃಷ್ಟಿಯಿಂದಲೂ ನೌಕರರಿಗೆ ಪರಿಹಾರವನ್ನ ನೀಡಿಲ್ಲ ಎಂದು ದೂರಿದರು.
ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ ಪರಿಹಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ಸಾವಿರಾರು ಕೋಟಿ ರೂಪಾಯಿಗಳ ಪ್ಯಾಕೇಜ್ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಕೇವಲ ಭಾಷಣಗಳ ಮೂಲಕ ಸಮಾಜದಲ್ಲಿ ಬಿಂಬಿಸಿಕೊಳ್ಳುವ ಬದಲು ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಲಿ ಎಂದರು. ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ನೌಕರರಿಗೆ ತಕ್ಷಣ ವೇತನ ಬಿಡುಗಡೆಗೊಳಿಸಬೇಕು ಎಂದರು.
ಸರ್ಕಾರ ಜನಸಮಾನ್ಯರ ಸಮಸ್ಯೆಗಳನ್ನು ಪರಿಹರಿಸಬೇಕು, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು, ಬಿಎಸ್‍ಎನ್‍ಎಲ್ ನೌಕರರಿಗೆ ವೇತನ ನೀಡಬೇಕು ಎಂದು ಒತ್ತಾಯಿಸಿದ ಜವರೇಗೌಡ, ಮುಂದಿನ ದಿನಗಳಲ್ಲಿ ಕಾರ್ಮಿಕ ರಕ್ಷಣಾ ವೇದಿಕೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಮಧುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ದೇವರಾಜು, ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ. ಶಶಿಕುಮಾರ್ ಹಾಗೂ ಜಿಲ್ಲಾ ಮಹಿಳಾ ಅಧ್ಯಕ್ಷೆ ಪಡಿಕಲ್ ಕುಸುಮ ಚಂದ್ರಶೇಖರ್ ಉಪಸ್ಥಿತರಿದ್ದರು.