ಮಾರುಕಟ್ಟೆಯಲ್ಲೇ ಸಂತೆ ಇರಲಿ : ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್ ಮನವಿ

June 18, 2020

ಮಡಿಕೇರಿ ಜೂ.18 : ಕೊರೊನಾ ಲಾಕ್ ಡೌನ್‍ನ ನಿರ್ಬಂಧಗಳ ಸಡಿಲಿಕೆಯೊಂದಿಗೆ ಸೀಮಿತ ಸಂಖ್ಯೆಯಲ್ಲಿ ವಿವಾಹ ಸಮಾರಂಭದ ಆಯೋಜನೆ, ಬಸ್‍ಗಳ ಸಂಚಾರಕ್ಕೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಹೀಗಿದ್ದೂ, ಇಲ್ಲಿಯವರೆಗೂ ನಗರದ ಸಂತೆ ಮಾರುಕಟ್ಟೆಯನ್ನು ತೆರೆಯಲು ಅವಕಾಶ ನೀಡದೆ ವರ್ತಕರು ಮತ್ತು ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಕೆ.ಜಿ.ಪೀಟರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಮಾರುಕಟ್ಟೆ ತೆರೆಯದಿರುವುದರಿಂದ ಅಲ್ಲೇ ಸುತ್ತಮುತ್ತಲ ರಸ್ತೆ ಬದಿಗಳಲ್ಲಿ, ಕೆಸರು ತುಂಬಿದ ಪ್ರದೇಶದ ಬಳಿಯಲ್ಲೆ ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟ ನಡೆಯುತ್ತಿರುವ ದುಸ್ಥಿತಿ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೆ ಸಂತೆ ಮಾರುಕಟ್ಟೆಯನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ತ್ಯಾಗರಾಜ ಕಾಲೋನಿ, ಮಂಗಳಾದೇವಿ ನಗರ ಹೀಗೆ ಬೆರಳೆಣಿಕೆಯ ಬಡಾವಣೆಗಳಲ್ಲಿನ ಬಡವರಿಗೆ ಮಾತ್ರ ನೆರವಿನ ಕಿಟ್ ಮತ್ತು ಹಾಲು ವಿತರಿಸಲಾಗಿದೆ. ನಗರದ ಉಳಿದ ಬಡಾವಣೆಗಳಲ್ಲು ಬಡ ಮಂದಿ ನೆಲೆಸಿದ್ದು, ಇವರಿಗೂ ನೆರವು ತಲುಪಿಸುವ ಕೆಲಸ ನಡೆಯಬೇಕೆಂದು ಆಗ್ರಹಿಸಿದರು.

error: Content is protected !!