ಮಾಸ್ಕ್ ಡೇ ಜನ ಜಾಗೃತಿ ಪಾದಯಾತ್ರೆಗೆ ಮಡಿಕೇರಿಯಲ್ಲಿ ಚಾಲನೆ

18/06/2020

ಮಡಿಕೇರಿ ಜೂ. 18 : ಕೊಡಗು ಜಿಲ್ಲಾಡಳಿತ ವತಿಯಿಂದ “ಮುಖಗವಸು ದಿನ” (ಮಾಸ್ಕ್ ಡೇ) ಪ್ರಯುಕ್ತ  ಆಯೋಜಿಸಲಾಗಿದ್ದ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋವಿಡ್-19 ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. 

ಕೋವಿಡ್-19 ಹರಡುವಿಕೆ ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿಮೂಡಿಸುವುದು ಅತ್ಯಾವಶ್ಯವಾಗಿರುವುದರಿಂದ ರಾಜ್ಯ ಸರ್ಕಾರವು 18 ನೇ ಜೂನ್ 2020 ರಂದು  “ಮಾಸ್ಕ್ ಡೇ” ದಿನವನ್ನಾಗಿ ಘೋಷಿಸಿ ಆದೇಶಿಸಿದ್ದು, ಸರ್ಕಾರದ ನಿರ್ದೇಶನದಂತೆ  ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ವತಿಯಿಂದ “ಮಾಸ್ಕ್ ಡೇ” ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಮಡಿಕೇರಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಬಳಿಯಿಂದ ಜನ ಜಾಗೃತಿ ಪಾದಯಾತ್ರೆ ನಡೆಸಿ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಕೋವಿಡ್-19 ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಆಗಿಂದಾಗ್ಗೆ ಸೋಪ್ ಬಳಿಸಿ ಕೈತೊಳೆದುಕೊಳ್ಳುವ ಮೂಲಕ ಮತ್ತು ಸ್ಯಾನಿಟೈಸರ್ ಬಳಸಿ ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.