ಚಾಮುಂಡೇಶ್ವರಿ ನಗರದಲ್ಲಿ ಭೂ ಕುಸಿತ : ಉಪ ವಿಭಾಗಾಧಿಕಾರಿ, ನಗರಸಭೆ ಪೌರಾಯುಕ್ತರ ಭೇಟಿ : ಪರಿಶೀಲನೆ

18/06/2020

ಮಡಿಕೇರಿ ಜೂ.18 : ಕೊಡಗು ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿಗೆ ಮಂಗಳವಾರ ರಾತ್ರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭೂ ಕುಸಿತ ಉಂಟಾದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಮತ್ತು ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಇದೇ ವೇಳೆ ಉಪ ವಿಭಾಗಾಧಿಕಾರಯವರು ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು. ಅಲ್ಲದೆ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಅವರು ಮಾಹಿತಿ ನೀಡಿ, ಈಗಾಗಲೇ ನಗರಸಭೆ ವತಿಯಿಂದ ಅಪಾಯದಂಚಿನಲ್ಲಿರುವ 127 ಮನೆಗಳಿಗೆ ನೋಟಿಸ್ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಮಂಗಳವಾರ ತಡರಾತ್ರಿ ಮಾಹಿತಿ ಬರುತ್ತಿದ್ದಂತೆ ಪರಿಹಾರ ಕಾರ್ಯಾಚರಣೆ ತಂಡವು ಭೇಟಿ ನೀಡಿ ಪರಿಶೀಲಿಸಿದೆ. ಇದೊಂದು ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, 5 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಪರಿಹಾರ ಕಾರ್ಯಾಚರಣೆ ತಂಡವು ಹತ್ತಿರದಲ್ಲೇ ಬೀಡುಬಿಟ್ಟಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಸಂದರ್ಭ ನೋಡಲ್ ಅಧಿಕಾರಿ ಅರುಂಧತಿ, ಮಡಿಕೇರಿ ತಹಶೀಲ್ದಾರ್ ಮಹೇಶ್ ಇತರರು ಇದ್ದರು.