ಚೆಟ್ಟಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ : ಆರು ಆರೋಪಿಗಳ ಬಂಧನ

ಮಡಿಕೇರಿ ಜೂ. 18 : ಮಡಿಕೇರಿ ಗ್ರಾಮಾಂತರ ಠಾಣೆ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿ ಆರು ಆರೋಪಿಗಳನ್ನು ಬಂಧಿಸಿ ಸುಮಾರು 5 ಕೆ.ಜಿ. ಗಾಂಜಾ ಮತ್ತು ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೆಟ್ಟಳ್ಳಿ ಉಪಠಾಣಾ ವ್ಯಾಪ್ತಿಯ ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾದ ಎನ್. ಕುಮಾರ್ ಆರಾಧ್ಯ ಮತ್ತು ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಸಿ.ಎನ್. ದಿವಾಕರ್ ನೇತೃತ್ವದ ತಂಡವು ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿ ಆರೋಪಿಗಳಾದ ಮೈಸೂರು ನಗರದ ಹೆಬ್ಬಾಳ ನಿವಾಸಿ ಆನಂದ (ಜ್ಞಾನನಂದ), ವಿರಾಜಪೇಟೆ. ಮೊಗರಗಲ್ಲಿ ನಿವಾಸಿ ಖಲೀಲ್, ಸೋಮವಾರಪೇಟೆ ತಾಲ್ಲೂಕು ವಾಲ್ನೂರು ತ್ಯಾಗತ್ತೂರು ನಿವಾಸಿ ಕೆ.ಎಸ್. ಫರೀದ್, ಅಭ್ಯತ್ಮಂಗಲ ಗ್ರಾಮ ದ ನಿವಾಸಿಗಳಾದ ಹೆಚ್.ಎನ್. ನಿಖಿಲ್ ಮತ್ತು ಹೆಚ್.ಎಸ್. ಹರೀಶ್, ಚೇರಳಶ್ರೀಮಂಗಲದ ನಿವಾಸಿ ಕೆ.ಎನ್.ಅರುಣ್ ಕುಮಾರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು, ಬಂಧಿತರಿಂದ 1,50,000 ರೂ ಮೌಲ್ಯದ 5 ಕೆ.ಜಿ ಗಾಂಜಾ, 5000 ರೂ ನಗದು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರು, ಆಟೋರಿಕ್ಷಾ ಮತ್ತು ಒಂದು ಬೈಕನ್ನು ಅಮಾನತುಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎನ್.ಡಿ.ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಸಿ.ಎನ್ ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹೆಚ್.ವಿ ಚಂದ್ರಶೇಖರ್, ಸದಾಶಿವ, ಮತ್ತು ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಮತ್ತು ಸಿಬ್ಬಂದಿಯವರಾದ ಹಮೀದ್, ಅನಿಲ್, ಶರತ್ ರೈ, ನಿರಂಜನ್, ಯೋಗೇಶ್, ವಸಂತ, ವೆಂಕಟೇಶ್, ಮಡಿಕೇರಿ ಗ್ರಾಮಾಂತರ ಠಾಣೆಯ ಶ್ರೀಧರ್, ತೀರ್ಥಕುಮಾರ್, ಮಂಜುನಾಥ್, ಶಶಿಧರ್, ಪ್ರವೀಣ್ ಕುಮಾರ್, ನಾಗರಾಜು, ಶಶಿ ,ರಾಜೇಶ್ ಮತ್ತು ಗಿರೀಶ್ ರವರು ಈ ಪ್ರಕರಣದ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳ ದಸ್ತಗಿರಿ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದ ಕಾರ್ಯತತ್ಪರತೆಯನ್ನು ಶ್ಲಾಘಿಸಿ ಅಭಿನಂದಿಸಲಾಗಿದೆ.
