ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ ಗೆ ಸಿ.ಜಿ.ಕೆ. ಪ್ರಶಸ್ತಿ

19/06/2020

ಮಡಿಕೇರಿ ಜೂ.19 : ರಂಗಭೂಮಿ ಪರಿಷತ್ತು ಕರ್ನಾಟಕ ಮತ್ತು ರಂಗಭೂಮಿ ಪ್ರತಿಷ್ಠಾನ ಕೊಡಗು ಕೊಡಲ್ಪಡುವ 2020ನೇ ಸಾಲಿನ “ಸಿ.ಜಿ.ಕೆ. ಪ್ರಶಸ್ತಿ”ಯನ್ನು ರಂಗಭೂಮಿ ಸಂಘಟಕ ಶ್ರೀಧರ್ ನೆಲ್ಲಿತ್ತಾಯ ಅವರಿಗೆ ದೊರಕಿದೆ.
ಖ್ಯಾತ ರಂಗ ನಿರ್ದೇಶಕ ದಿವಂಗತ ಸಿ.ಜಿ.ಕೃಷ್ಣಸ್ವಾಮಿ ಜನ್ಮ ದಿನ ಜೂನ್ 27 ರಂದು ಕರ್ನಾಟಕದ ಪ್ರತಿ ಜಿಲ್ಲೆಯ ಒಬ್ಬ ರಂಗಕರ್ಮಿಗೆ ಈ ಪ್ರಶಸ್ತಿ ನೀಡಲಾಗುವುದು. ಕೊಡಗು ಜಿಲ್ಲೆಯಿಂದ ಈ ಬಾರಿ ಶ್ರೀಧರ್ ಅವರ ಹೆಸರನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸೂಚಿಸಿದ್ದರು.
ಶ್ರೀಧರ್ ನೆಲ್ಲಿತ್ತಾಯ 1984ರಲ್ಲಿ ರಂಗಭೂಮಿ ಪ್ರವೇಶ ಮಾಡಿ ಪೊನ್ನಂಪೇಟೆಯ “ಸೃಷ್ಟಿ” ತಂಡದಲ್ಲಿ ಬಾಲನಟನಾಗಿ ಸೇರಿ ನಂತರ ಶಿಕ್ಷಣ ಮುಗಿದ ಮೇಲೆ ಮಕ್ಕಳ ನಾಟಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ರಂಗಭೂಮಿ ಸಂಘಟನೆಗೆ ಒತ್ತು ನೀಡಿ ಕೊಡಗಿನ ರಂಗಭೂಮಿ ಬೆಳವಣಿಗೆಗೆ ಮಹತ್ವದ ಕಾಣಿಕೆ ನೀಡಿದ್ದಾರೆ. ಈ ಎಲ್ಲಾ ರಂಗಸೇವೆಗಾಗಿ ಈ ಪ್ರಶಸ್ತಿ ಸಂದಿದೆ ಎಂದು ರಂಗಭೂಮಿ ಪ್ರತಿಷ್ಠಾನದ ಸಂಚಾಲಕಿ ಅನಿತಾ ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.