ಹುತಾತ್ಮ ಯೋಧರಿಗೆ ಜಿಲ್ಲಾ ಕಾಂಗ್ರೆಸ್‍ನಿಂದ ಗೌರವ ನಮನ

19/06/2020

ಮಡಿಕೇರಿ ಜೂ.19 : ಚೀನಾ ಸೈನಿಕರ ದಾಳಿಯಿಂದ ಹುತಾತ್ಮರಾದ ಭಾರತೀಯ ಸೈನಿಕರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು.
ನಗರದ ಯುದ್ಧ ಸ್ಮಾರಕದ ಬಳಿ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಹಾಗೂ ಪದಾಧಿಕಾರಿಗಳು ಮೌನ ಆಚರಣೆಯ ಮೂಲಕ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭ ಮಾತನಾಡಿದ ಮಂಜುನಾಥ್ ಕುಮಾರ್ ಗಡಿ ಒಪ್ಪಂದವನ್ನು ಉಲ್ಲಂಘಿಸಿ ಅಕ್ರಮವಾಗಿ ಗಡಿ ಪ್ರವೇಶ ಮಾಡುವ ಮೂಲಕ ಚೀನಾ ಶಾಂತಿ ಸೂತ್ರಕ್ಕೆ ಅಪಚಾರವೆಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರ ಬಳಸುವಂತ್ತಿಲ್ಲ. ಇದನ್ನು ಪ್ರಾಮಾಣಿಕವಾಗಿ ಪಾಲಿಸಿದ ಭಾರತೀಯ ಸೈನಿಕರ ಮೇಲೆ ಪೂರ್ವಯೋಜಿತವಾಗಿ ಹೇಡಿ ಬುದ್ಧಿಯ ಚೀನಾ ದೇಶ ಕಲ್ಲುಗಳು ಮತ್ತು ಕಬ್ಬಿಣದ ಸಲಾಕೆಗಳಿಂದ ದಾಳಿ ನಡೆಸಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು.
ದೇಶಕ್ಕಾಗಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ತ್ಯಾಗ, ಬಲಿದಾನಕ್ಕೂ ಸಿದ್ಧ ಇರುವುದಾಗಿ ಮಂಜುನಾಥ್ ಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.