ರಾಹುಲ್ ಗಾಂಧಿ ಜನ್ಮದಿನ : ಕಾಂಗ್ರೆಸ್‍ನಿಂದ ಕೋವಿಡ್-19 ವಾರಿಯರ್ಸ್ ಗೆ ಸನ್ಮಾನ

ಮಡಿಕೇರಿ ಜೂ.19 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಕೋವಿಡ್-19 ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು, ಕೊರೋನಾ ಸೋಂಕು ಹರಡದಂತೆ ತಡೆಯುವಲ್ಲಿ ಮತ್ತು ಜಿಲ್ಲೆಯ ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮ ವಹಿಸಿ ದುಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವೆಂದರು.
ಪ್ರಾಣದ ಹಂಗು ತೊರೆದು ಜನಸಾಮಾನ್ಯರ ಬಳಿಗೆ ತೆರಳಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ಶಂಕಿತರನ್ನು ಪರೀಕ್ಷೆಗೆ ಒಳಪಡುವಂತೆ ಮಾಡುವ ಮಹತ್ವದ ಪಾತ್ರ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗಳ ಸೇವೆ ಅದ್ಭುತವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್, ಕೆಪಿಸಿಸಿ ವಿರಾಜಪೇಟೆ ಬ್ಲಾಕ್ ಉಸ್ತುವಾರಿ ಪಿ.ರಾಜು, ಬ್ಲಾಕ್ ಅಧ್ಯಕ್ಷರುಗಳಾದ ಬಿ.ಬಿ.ಸತೀಶ್, ಅನಂತ್ ಕುಮಾರ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಪದಾಧಿಕಾರಿಗಳು, ಕಾರ್ಯಕರ್ತರು, ವೈದ್ಯರುಗಳಾದ ಡಾ.ಗೋಪಿನಾಥ್ ಮತ್ತು ಡಾ.ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ಸಾಮಾಜಿಕ ಜಾಲತಾಣದ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಸ್ವಾಗತಿಸಿ, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪಕ್ಷದ ಮುಖಂಡರು ಆರೋಗ್ಯ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಿದರು.


