ವಸತಿ ಸೌಲಭ್ಯಕ್ಕಾಗಿ ಆಗ್ರಹ : ಸಂತ್ರಸ್ತರಿಗಾಗಿ ಜೂ.22 ರಂದು ಜೆಡಿಎಸ್ ಪಾದಯಾತ್ರೆ

19/06/2020

ಮಡಿಕೇರಿ ಜೂ.19 : ಕೊಡಗು ಜಿಲ್ಲೆಯಲ್ಲಿ 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಜೂ.22 ರಂದು ಜಾತ್ಯತೀತ ಜನತಾದಳ(ಜೆಡಿಎಸ್) ನಾಪೋಕ್ಲುವಿನಿಂದ ಮೂರ್ನಾಡುವರೆಗೆ ‘ಪಾದಯಾತ್ರೆ’ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಜಾಷಿರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30 ಗಂಟೆಗೆ ನಾಪೋಕ್ಲು ಹಳೇ ತಾಲ್ಲೂಕಿನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದರು. ಮುಂದಿನ ದಿನಗಳಲ್ಲಿ ಕರಡಿಗೋಡು, ನೆಲ್ಲಿಹುದಿಕೇರಿ, ಕೊಂಡಂಗೇರಿ ವಿಭಾಗಗಳ ಸಂತ್ರಸ್ತರ ಪರವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದೀಗ ಮತ್ತೆ ಮಳೆಗಾಲ ಆರಂಭವಾಗುತ್ತಿದ್ದು, ಬರೆ ಕುಸಿತ ಪ್ರವಾಹದ ಭೀತಿ ಎದುರಾಗಿದ್ದು, ನದಿ ದಡದಲ್ಲಿರುವ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸುವವರೆಗೆ ಪಕ್ಷದ ವತಿಯಿಂದ ನಿರಂತರ ಹೋರಾಟ ನಡೆಯಲಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ತಾತ್ಕಾಲಿಕ ಪರಿಹಾರ ಕೇಂದ್ರವನ್ನು ತೆರೆಯುವುದು ಕೂಡ ಜಿಲ್ಲಾಡಳಿತಕ್ಕೆ ಕಷ್ಟಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಿನಿಂದಲೆ ಮುಂಜಾಗ್ರತೆ ವಹಿಸಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವರು ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದು, ಅದಕ್ಕಿಂತ ಮೊದಲು ಜಿಲ್ಲೆಯಲ್ಲಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಿ ಎಂದು ಜಾಷಿರ್ ಹೇಳಿದರು.
ಕೊಡಗು ಜಿಲ್ಲೆಯನ್ನು ಕಳೆದ ಎರಡು ದಶಕಗಳಿಂದ ಬಿಜೆಪಿ ಜನಪ್ರತಿನಿಧಿಗಳೆ ಪ್ರತಿನಿಧಿಸುತ್ತಿದ್ದು, ಇವರು ಜಿಲ್ಲೆಯ ಸಮಸ್ಯೆಗಳನ್ನು ಅರಿತವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅನುಭವಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿಗಳನ್ನಾಗಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.
ಭಾರತ-ಚೈನಾ ಗಡಿಭಾಗದಲ್ಲಿ ಚೀನ ಸೈನಿಕರು ಭಾರತದ ಯೋಧರನ್ನು ಹತ್ಯೆ ಮಾಡಿರುವುದನ್ನು ಪಕ್ಷದ ವತಿಯಿಂದ ಖಂಡಿಸುವುದಾಗಿ ತಿಳಿಸಿದ ಅವರು, ಭಾರತ ಚೀನದ ವಿರುದ್ಧ ಯುದ್ಧ ಸಾರುವುದಕ್ಕಿಂತ ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ನೀಡಬೇಕು ಹಾಗೂ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದ ‘ಕಾಂಪಿಟ್ ವಿತ್ ಚೈನಾ’ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ಸ್ವಾವಲಂಬನೆ ಹೊಂದಲು ಹಾಗೂ ಚೀನಾಕ್ಕೆ ಆರ್ಥಿಕವಾಗಿ ಹೊಡೆತ ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಉಪಾಧ್ಯಕ್ಷ ಪಿ.ಎ.ಯೂಸುಫ್ ಮಾತನಾಡಿ, ಕಳೆÉದ ಸಾಲಿನಲ್ಲಿ ಕೊಂಡಂಗೇರಿಯಲ್ಲಿ 60 ಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ಸಂಪೂರ್ಣವಾಗಿ ಹಾನಿಗೀಡಾಗಿವೆ. ಆದರೆ, ಈ ಕುಟುಂಬಗಳಿಗೆ ಇದುವರೆಗೂ ಸರ್ಕಾರ ಪರಿಹಾರವನ್ನಾಗಲಿ ಪರ್ಯಾಯ ವ್ಯವಸ್ಥೆಯನ್ನಾಗಲಿ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ಈ ಕುಟುಂಬಗಳಿಗೆ 10 ತಿಂಗಳ ಮನೆ ಬಾಡಿಗೆಯನ್ನಾದರು ನೀಡುವಂತಾಗಬೇಕು. ಕಾವೇರಿಯ ಪ್ರವಾಹದಿಂದ ಹಾನಿಗೊಳಗಾಗಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್ ಮಾತನಾಡಿ, ಜಿಲ್ಲೆಯ ಕಂದಾಯ ಹಾಗೂ ಸಾರಿಗೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಕೊರೋನಾದ ಈ ಸಂದರ್ಭದಲ್ಲಿ ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವವರನ್ನು ನಿಯಂತ್ರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂದನ ಈರಪ್ಪ ಹಾಗೂ ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷ ಕೆ.ಇ. ಮೊಯ್ದು ಉಪಸ್ಥಿತರಿದ್ದರು.