2019ರ ಪ್ರಾಕೃತಿಕ ವಿಕೋಪ : ವಿವಿಧ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರದಿಂದ ರೂ. 100 ಕೋಟಿ ಬಿಡುಗಡೆ

19/06/2020

ಮಡಿಕೇರಿ ಜೂ. 19 : ಕೊಡಗು ಜಿಲ್ಲೆಯಲ್ಲಿ ಕಳೆದ (2019ನೇ) ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಸಾರ್ವಜನಿಕ ರಸ್ತೆ, ಸೇತುವೆ, ತಡೆಗೋಡೆ, ಕಟ್ಟಡ ಮತ್ತಿತರ ಮೂಲಭೂತ ಸೌಕರ್ಯಗಳನ್ನು ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಶಾಲೆಗಳು, ಅಂಗನವಾಡಿ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿಗಾಗಿ 536 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಪ್ರಸ್ತಾವನೆ ಆರ್ಥಿಕ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ತಕ್ಷಣ 100 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿತ್ತು. ಅದರಂತೆ ಸರಕಾರದ ಸುಮಾರು 11 ಇಲಾಖೆಗಳು ಕಾಮಗಾರಿಗಳ ಪಟ್ಟಿ ಸಲ್ಲಿಸಿ ಕಾಮಗಾರಿ ನಡೆಸಲು ಕಳೆದ ಅಕ್ಟೋಬರ್‍ನಲ್ಲಿ ಜಿಲ್ಲಾಧಿಕಾರಿಗಳೂ ಆಡಳಿತಾತ್ಮಕ ಒಪ್ಪಿಗೆಯನ್ನೂ ನೀಡಿದ್ದರು.

ಆದರೆ ಈ ಇಲಾಖೆಗಳು ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆದು ಕೆಲಸ ಪ್ರಾರಂಭಿಸಿದ್ದರೂ, ಇದುವರೆಗೂ ಹಣ ಬಿಡುಗಡೆಯಾಗದಿರುವ ಬಗ್ಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗಮನಸೆಳೆದಿದ್ದರಲ್ಲದೆ, ಕೂಡಲೇ ಅನುದಾನ ಬಿಡುಗಡೆಗೆ ಆದೇಶಿಸುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ 100 ಕೋಟಿ ರೂ. ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದು, ಅದರಂತೆ ಸರಕಾರದ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎನ್.ಮೂರ್ತಿ ಅವರು, ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಅನುಷ್ಠಾನ ಸಂಸ್ಥೆಗಳು ಪೂರ್ಣ ಠೇವಣಿಗೆ ಒತ್ತಾಯಿಸದೆ, ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಅನುಷ್ಠಾನಗೊಳಿಸುವ ಸಂಸ್ಥೆಗಳು ಪ್ರಗತಿಯನುಸಾರ ಅನುದಾನ ಬಿಡುಗಡೆಗಾಗಿ ಸಂಬಂಧಿಸಿದ ಬಿಲ್‍ಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.