ಜಿಲ್ಲೆಗೆ ಹೆಚ್ಚುವರಿ ಯುರಿಯಾ ಪೂರೈಕೆ

19/06/2020

ಮಡಿಕೇರಿ ಜೂ.19 : ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚುವರಿಯಾಗಿ ಯುರಿಯಾ ಸೇರಿದಂತೆ ಇತರೆ ರಸಗೊಬ್ಬರ ಪೂರೈಕೆಯಾಗಿದೆ. ಜೂನ್ ತಿಂಗಳಲ್ಲಿ ಎರಡು ಸಾವಿರ ಮೆಟ್ರಿಕ್ ಟನ್ ಯುರಿಯಾ ರಸಗೊಬ್ಬರ ಬೇಕಾಗಿತ್ತು. ಹೀಗಾಗಿ ಕೇಂದ್ರ ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದ್ದರು. ಆ ದಿಸೆಯಲ್ಲಿ ಹೆಚ್ಚುವರಿಯಾಗಿ ಯುರಿಯಾ ರಸಗೊಬ್ಬರ ಸೇರಿದಂತೆ ಜಿಲ್ಲೆಗೆ ಅತ್ಯಗತ್ಯವಾಗಿ ಬೇಕಿರುವ ರಸಗೊಬ್ಬರವನ್ನು ಪೂರೈಸಲಾಗಿದೆ.
ಕೊಡಗು ಜಿಲ್ಲೆಗೆ ವಾರ್ಷಿಕ ಹಂಗಾಮಿನಲ್ಲಿ 16,300 ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದ್ದು, ಇಲ್ಲಿಯವರೆಗೆ 7,929 ಮೆಟ್ರಿಕ ಟನ್ ಯುರಿಯಾ ಮಾರಾಟವಾಗಿದ್ದು ಮುಕ್ತಾಯಗೊಂಡ ದಾಸ್ತಾನು 6,503 ಮೆಟ್ರಿಕ್ ಟನ್.
ಜೂನ್ ತಿಂಗಳಿನಲ್ಲಿ 2,000 ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದ್ದು, ಇಲ್ಲಿಯವರೆಗೆ 670 ಮೆಟ್ರಿಕ್ ಟನ್ ಪೂರೈಕೆಯಾಗಿರುತ್ತದೆ.
ಜಿಲ್ಲೆಗೆ ಯೂರಿಯಾ ಕೊರತೆಯಾಗದ ನಿಟ್ಟಿನಲ್ಲಿ ರಾಜ್ಯವು ಕ್ರಮವಾಗಿ ಹಾಸನ ಮತ್ತು ಮೈಸೂರು ಬಫರ್ ಸ್ಟಾಕ್‍ನಿಂದ 200 ಮೆ.ಟನ್ ಮತ್ತು 500 ಮೆಟ್ರಿಕ್ ಟನ್ ಯೂರಿಯಾವನ್ನು ಎಂಸಿಎಫ್‍ಎಲ್ ಮೂಲಕ 2 ರಿಂದ 3 ದಿನಗಳಲ್ಲಿ ಜಿಲ್ಲೆಗೆ ಪೂರೈಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.