ಗಡಿ ಗ್ರಾಮ ಕರಿಕೆಯ ಜನರ ಗೋಳು ಕೇಳುವವರಿಲ್ಲ : ರಸ್ತೆ ನಿರ್ಬಂಧವೇ ದೊಡ್ಡ ಸಮಸ್ಯೆ

19/06/2020

ಮಡಿಕೇರಿ ಜೂ.19 : ಕೊಡಗಿನ ಗಡಿಭಾಗದ ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮದಲ್ಲಿ ಕೊರೋನಾ ಹಿನ್ನೆಲೆ ಮಣ್ಣಿನಿಂದ ಮುಚ್ಚಲಾಗಿರುವ ಕೇರಳದ ಗಡಿ ರಸ್ತೆಯನ್ನು, ಗ್ರಾಮಸ್ಥರ ಹಿತದೃಷ್ಟಿಯಿಂದ ಮತ್ತು ಅನಾರೋಗ್ಯ ಪೀಡಿತರ ತುರ್ತು ಚಿಕಿತ್ಸೆಗಾಗಿ ಬಂಧ ಮುಕ್ತಗೊಳಿಸಬೇಕೆಂದು ಸ್ಥಳೀಯ ಗ್ರೀನ್ ಸ್ಟಾರ್ ಯೂತ್ ಕ್ಲಬ್ ಅಧ್ಯಕ್ಷ ಕೆ.ಎ.ಸಿರಾಜ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ವ್ಯಾಪಿಸದಂತೆ ಸರ್ಕಾರ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ಗಡಿ ರಸ್ತೆಯನ್ನು ಮುಚ್ಚಿರುವುದಕ್ಕೂ ನಮ್ಮ ವಿರೋಧವಿಲ್ಲ. ಆದರೆ ಗ್ರಾಮದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ತುರ್ತು ಸಂದರ್ಭಗಳಲ್ಲಿ ಕೇರಳದ ಪಾಣತ್ತೂರಿನ ಮೂಲಕ ಸುಳ್ಯ, ಮಂಗಳೂರು ಆಸ್ಪತ್ರೆಗಳಿಗೆ ತೆರಳಲು ಅನುಕೂಲವಾಗುವಂತೆ, ಮುಚ್ಚಲ್ಪಟ್ಟಿರುವ ಕೇರಳ ರಸ್ತೆಯನ್ನು ಒಂದಷ್ಟು ತೆರವುಗೊಳಿಸಬೇಕು. ಬ್ಯಾರಿಕೇಡ್ ಅಳವಡಿಸಿ ಅನಾರೋಗ್ಯ ಪೀಡಿತರನ್ನು ಕರೆದೊಯ್ಯಲು ಅವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಸುಮಾರು ಐದು ಸಾವಿರ ಜನಸಂಖ್ಯೆ ಹೊಂದಿರುವ ಕರಿಕೆಗೆ ಸಮೀಪದ ಮತ್ತೊಂದು ಜಿಲ್ಲೆಯ ಗ್ರಾಮವೆಂದರೆ ಅದು ಭಾಗಮಂಡಲವಾಗಿದೆ. ಅದು ಕರಿಕೆಯಿಂದ 30 ಕಿ. ಮೀ. ದೂರದಲ್ಲಿದೆ, ಇದೇ ಕಾರಣಕ್ಕೆ ಗ್ರಾಮಸ್ಥರು ದೈನಂದಿನ ಚಟುವಟಿಕೆಗಳಿಗೆ ಹಾಗೂ ತುರ್ತು ಚಿಕಿತ್ಸೆಗೆ ನೆರೆಯ ಕೇರಳದ ಪಾನತ್ತಡಿ ಪಂಚಾಯತ್‍ಗೆ ಒಳಪಟ್ಟ, 6 ಕಿ.ಮೀ. ದೂರದಲ್ಲಿರುವ ಪಾಣತ್ತೂರು ಗ್ರಾಮವನ್ನು ಅವಲಂಭಿಸಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆ ಎದುರಾದಾಗ ಪಾಣತ್ತೂರು ಮೂಲಕ ಕರ್ನಾಟಕದ ಸುಳ್ಯ ಮತ್ತು ಮಂಗಳೂರು ಆಸ್ಪತ್ರೆಗೆ ತೆರಳುತ್ತಾರೆ ಎಂದರು.
ಕರಿಕೆಯಿಂದ ಮಂಗಳೂರಿಗೆ 103 ಕಿ.ಮೀ. ನಷ್ಟು ದೂರವಿದೆ. ಪ್ರಸ್ತುತ ಗಡಿ ರಸ್ತೆಯನ್ನು ಮುಚ್ಚಿರುವುದರಿಂದ ಮಡಿಕೇರಿ ಮೂಲಕ ಮಂಗಳೂರಿಗೆ ತೆರಳಲು 230 ಕಿ.ಮೀ.ಗಳಷ್ಟು ದೂರ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿ ರಸ್ತೆಯನ್ನು ತುರ್ತು ಚಿಕಿತ್ಸೆಗಾಗಿ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಸಿರಾಜ್ ಒತ್ತಾಯಿಸಿದರು.
::: ಹದಗೆಟ್ಟ ರಸ್ತೆ :::
ಕರಿಕೆ ಭಾಗಮಂಡಲ ರಸ್ತೆಯು ಅರಣ್ಯ ಪ್ರದೇಶದಿಂದ ಕೂಡಿದ್ದು, ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಇದರಿಂದ ತುರ್ತು ಆರೋಗ್ಯ ಸಮಸ್ಯೆಗಳು ಉಂಟಾದಾಗ ರೋಗಿಯನ್ನು ಮಡಿಕೇರಿ ಮೂಲಕ ಮಂಗಳೂರಿಗೆ ಕರೆದೊಯ್ಯಲು ಸುಮಾರು 6 ಗಂಟೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಪಾಣತ್ತೂರು ಮೂಲಕವಾದರೆ ಮಂಗಳೂರಿಗೆ ಕೇವಲ 3 ಗಂಟೆಗಳ ಅವಧಿಯಲ್ಲಿ ತಲುಪಲು ಸಾಧ್ಯವಿದೆ ಎಂದು ತಿಳಿಸಿದರು.
::: ಹೃದ್ರೋಗಿಗಳ ಸಾವು :::
ಗಡಿ ರಸ್ತೆ ಮುಚ್ಚಲ್ಪಟ್ಟ ಹಿನ್ನೆಲೆ ಸೂಕ್ತ ಸಮಯದಲ್ಲಿ ಚಿಕತ್ಸೆ ಕೊಡಿಸಲು ಸಾಧ್ಯವಾಗದೆ ಕರಿಕೆ ವ್ಯಾಪ್ತಿಯಲ್ಲಿ ಮೂವರು ಹೃದ್ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ತಿಳಿಸಿದ ಸಿರಾಜ್, ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ರಸ್ತೆ ಸಂಪರ್ಕ ಕಲ್ಪಿಸಬೇಕೆಂದರು.
::: ಸೌಲಭ್ಯಗಳ ಕೊರತೆ :::
ಕರಿಕೆ ಗ್ರಾಮದಲ್ಲಿ ಒಂದು ಸಣ್ಣ ಆಸ್ಪತ್ರೆ ಇದ್ದು, ಅಗತ್ಯ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ. ಇಲ್ಲಿ ಸೀಮಿತ ಔಷಧಿಗಳು ಮಾತ್ರ ಲಾಭ್ಯವಾಗುತ್ತದೆ. ಅಲ್ಲದೆ, ಯಾವುದೇ ರೀತಿಯ ಲ್ಯಾಬ್ ಸೌಲಭ್ಯಗಳಿಲ್ಲ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಈ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ರೋಗಿಗಳ ರಕ್ತ ಪರೀಕ್ಷೆ ಇಲ್ಲಿ ನಡೆಸುವುದು ಅಸಾಧ್ಯವಾಗಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.
::: ಆಂಬ್ಯುಲೆನ್ಸ್ ಕೊರತೆ :::
ಕರಿಕೆ ಗ್ರಾಮದ ಜನರಿಗೆ ತುರ್ತಾಗಿ ಚಿಕಿತ್ಸೆ ನೀಡಲು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಅವರು, ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.
::: ವಿದ್ಯಾರ್ಥಿಗಳಿಗೆ ತೊಂದರೆ :::
ಶಿಕ್ಷಣದ ಸಂಕಷ್ಟ-ಕರಿಕೆ ಗ್ರಾಮಕ್ಕೆ ಒಂದು ಕೆಎಸ್‍ಆರ್‍ಟಿಸಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಬೆಳಗ್ಗೆ 6 ಗಂಟೆಗೆ ತೆರಳಬೇಕಾಗಿದೆ. ಇದೀಗ ಕೊರೊನಾ ಲಾಕ್‍ಡೌನ್‍ನಿಂದ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಆನ್‍ಲೈನ್ ಶಿಕ್ಷಣ ಮಾಡುವುದಾಗಿ ತಿಳಿಸಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಕಂಪೆನಿಯ ಟವರ್ ಮಾತ್ರ ಇದ್ದು, ಇಲ್ಲಿ ಕೇವಲ 2ಜಿ ನೆಟ್‍ವರ್ಕ್ ಮಾತ್ರ ಲಭ್ಯವಿದೆ. ವಿದ್ಯುತ್ ಇಲ್ಲದಿದ್ದರೆ ಈ ನೆಟ್‍ವರ್ಕ್ ಕೂಡ ದೊರಕುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಪಡೆಯುವುದಾದರು ಹೇಗೆಂದು ಪ್ರಶ್ನಿಸಿದ ಸಿರಾಜ್, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಗ್ರಾಮಕ್ಕೆ ಕನಿಷ್ಠ 3ಜಿ ನೆಟ್‍ವರ್ಕ್ ಕಲ್ಪಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಗ್ರಾಮದಲ್ಲಿ 1 ರಿಂದ 10 ನೇ ತರಗತಿಯವರೆಗೆ ಮಾತ್ರ ಶಿಕ್ಷಣಕ್ಕೆ ಅವಕಾಶವಿದ್ದು, ಪದವಿ ಪೂರ್ವ ಶಿಕ್ಷಣಕ್ಕೆ ಭಾಗಮಂಡಲ ಇಲ್ಲವೆ ಸುಳ್ಯವನ್ನು ಅವಲಂಬಿಸುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರಿಕೆ ವಿಭಾಗಕ್ಕೆ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಎಂ.ಎ.ಜಾಬಿರ್, ಸದಸ್ಯರುಗಳಾದ ಸಿ.ಹೆಚ್.ಅಶ್ರಫ್, ಪಿ.ಕೆ.ಮುನೀರ್ ಹಾಗೂ ಟಿ.ಕೆ.ಶೌಕತ್ ಉಪಸ್ಥಿತರಿದ್ದರು.