ಸಿದ್ದಾಪುರದಲ್ಲಿ ಬೀದಿ ನಾಯಿಗಳ ಹಾವಳಿ : ಸೂಕ್ತ ಕ್ರಮಕ್ಕೆ ಒತ್ತಾಯ

19/06/2020

ಮಡಿಕೇರಿ ಜೂ.19 : ಸಿದ್ದಾಪುರ ಬಸ್ ನಿಲ್ದಾಣ ಸೇರಿದಂತೆ ಜನರು ಹೆಚ್ಚು ಇರುವ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಆತಂಕ ಸೃಷ್ಟಿಯಾಗಿದೆ.
ಕಳೆದ ಒಂದು ವರ್ಷದಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುತ್ತಮುತ್ತ ಸುತ್ತಾಡುತ್ತಾ ದಾಳಿ ಮಾಡುವ ಭೀತಿ ಮೂಡಿಸುತ್ತಿವೆ. ಸಾರ್ವಜನಿಕರು ಗ್ರಾ.ಪಂ ಗೆ ದೂರು ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಆದರೆ ಗ್ರಾ.ಪಂ ಮಾತ್ರ ಶ್ವಾನಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಣಿ ದಯಾ ಸಂಘದ ಅಡ್ಡಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದೆ.
ವಿರಾಜಪೇಟೆಯಲ್ಲಿ ಇತ್ತೀಚೆಗೆ ಹುಚ್ಚು ನಾಯಿ ಕಡಿತ ಪ್ರಕರಣ ನಡೆದ ಮೇಲೆ ಬೀದಿ ನಾಯಿಗಳ ಬಗ್ಗೆ ಭಯ ಮೂಡಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ನಾಯಿಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನಾದರೂ ಮಾಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.