ಎನ್‌ಕೌಂಟರ್‌ಗೆ 8 ಉಗ್ರರು ಬಲಿ

20/06/2020

ಶ್ರೀನಗರ ಜೂ.20 : ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡು ಪ್ರದೇಶಗಳಲ್ಲಿ ಎನ್‍ಕೌಂಟರ್ ನಡೆಸಲಾಗಿದ್ದು, 8 ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಲೆಫ್ಟಿನೆಂಟ್ ಜನರಲ್ ಬಗ್ಗಾವಲ್ಲಿ ಸೋಮಶೇಖರ್ ರಾಜು ಅವರು, ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಹಾಗೂ ಶೋಪಿಯಾನ್ ಎರಡೂ ಜಿಲ್ಲೆಗಳಲ್ಲಿಯೂ ಎರಡು ಪ್ರತ್ಯೇಕ ಎನ್’ಕೌಂಟರ್ ನಡೆಸಲಾಗಿದ್ದು, 8 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಶೋಪಿಯಾನ್ ಜಿಲ್ಲೆ ಪ್ಯಾಂಪೋರಾದಲ್ಲಿರುವ ಮಸೀದಿಯಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಸಾವು-ನೋವು, ನಷ್ಟಗಳು ಸಂಭವಿಸಿಲ್ಲ. ಕಾಶ್ಮೀರಿಗರು ಶಾಂತಿಯನ್ನು ನಂಬಿದ್ದು, ಅವರ ನಂಬಿಕೆಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಕಾಶ್ಮೀರಿಗರ ಈ ನಂಬಿಕೆಯಿಂದಲೇ ನಾವು ಈ ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮುಂದಿನ ಕೆಲ ತಿಂಗಳಲ್ಲಿ ಇಂತಹದ್ದೇ ಮತ್ತಷ್ಟು ಕಾರ್ಯಾಚರಣೆಗಳು ನಡೆಯಲಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೊಳ್ಳುವ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಉಗ್ರ ಸಂಘಟನೆಗೆ ಕೆಲ ದಿನಗಳ ಹಿಂದಷ್ಟೇ 49 ಮಂದಿ ಸೇರ್ಪಡೆಗೊಂಡಿದ್ದರು. ಇದರಲ್ಲಿ ಈ ವರೆಗೂ 27 ಮಂದಿಯನ್ನು ಹತ್ಯೆ ಮಾಡಲಾಗಿದೆ. ಯುವಕರನ್ನು ಹತ್ಯೆ ಮಾಡುವುದು ನಮಗೆ ಸಂತೋಷವನ್ನು ನೀಡುವುದಿಲ್ಲ. ಆದರೆ, ಯಾರಾದರೂ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಇತರರಿಗೆ ಹಾನಿಯುಂಟು ಮಾಡಿದರೆ, ನಮ್ಮ ಪ್ರತಿಕ್ರಿಯೆಯನ್ನು ಕಾರ್ಯಾಚರಣೆ ಮೂಲಕ ನೀಡಲಾಗುತ್ತಿದೆ.