ಇದು ಪ್ರತೀಕಾರದ ಸಮಯವಲ್ಲ

20/06/2020

ಬೆಂಗಳೂರು ಜೂ.20 : ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಸಂಘರ್ಷ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ, ಇದು ಪ್ರಚೋದನೆ ಮತ್ತು ಪ್ರತೀಕಾರದ ಸಮಯವಲ್ಲ. ಇತ್ತೀಚಿನ ದಿನಗಳಲ್ಲಿ, ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಗಳು, ಯೋಧರ ಸ್ಥಿತಿಗತಿ, ರಾಜತಾಂತ್ರಿಕ ವ್ಯವಸ್ಥೆ ಕುರಿತ ಪರಿಸ್ಥಿತಿ ಮತ್ತು ಮಾತುಕತೆ ಪ್ರಗತಿ ಕುರಿತು ವಿರೋಧ ಪಕ್ಷದ ನಾಯಕರಿಗೆ ವಿವರವಾದ ಮಾಹಿತಿ ನೀಡಬೇಕು. ಗಡಿ ಸಂಘರ್ಷದ ಬಗ್ಗೆ ಮಾಧ್ಯಮಗಳಿಂದ ಮಾಹಿತಿಗಳು ಲಭ್ಯವಾಗಿದೆಯೇ ಹೊರತು ಇದೂವರೆಗೆ ನಿಖರ ವಿವರಗಳು ಕೇಂದ್ರದಿಂದ ದೊರೆತಿಲ್ಲ. ಹೀಗಾಗಿ ಜನತೆಗೆ ಖಚಿತ ಮಾಹಿತಿ ಒದಗಿಸುವಂತೆ ಕೋರಿದ್ದಾರೆ.