ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ : ರೈತ ಸಂಘದಿಂದ ಮಡಿಕೇರಿಯಲ್ಲಿ ಪ್ರತಿಭಟನೆ

20/06/2020

ಮಡಿಕೇರಿ ಜೂ.20 : ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಮತ್ತು ತಿದ್ದುಪಡಿಯನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ (ನಂಜುಂಡಸ್ವಾಮಿ) ಹಾಗೂ ಹಸಿರು ಸೇನೆ ಸದಸ್ಯರು ಶನಿವಾರ ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಅವರ ನೇತೃತ್ವದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಸಲು ಮುಂದಾದಾಗ ಮಧ್ಯಪ್ರವೇಶಿಸಿದ ಡಿವೈಎಸ್‍ಪಿ ದಿನೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರುಗಳು ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಸ್ತೆ ತಡೆ ಮಾಡಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡದಂತೆ ಮನವಿ ಮಾಡಿದರು. ಮಾನವ ಸರಪಳಿ ಮಾಡುವಂತೆ ಸಲಹೆ ನೀಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚಿಮ್ಮಂಗಡ ಗಣೇಶ್ ಅವರು, ಕೊಡಗು ದಕ್ಷಿಣ ಭಾರತಕ್ಕೆ ಜಲ ಮೂಲದ ಕೇಂದ್ರವಾಗಿದೆ. ಇಲ್ಲಿನ ಜೀವವೈವಿಧ್ಯತೆ, ಆಹಾರ ಉತ್ಪಾದನೆಗೆ ರಾಜ್ಯ ಸರಕಾರ ಜಾರಿಗೆ ತರಲುದ್ದೇಶಿಸಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
1961ರ ಭೂಸುಧಾರಣೆ ಕಾಯ್ದೆಯ 79 ಎಬಿಸಿ ಮತ್ತು 80ನೇ ಕಲಂ ನಿಯಮದಡಿ ಕೃಷಿ ಭೂಮಿಯನ್ನು ರೈತರಲ್ಲದವರಿಗೆ ಮಾರಾಟ ಮಾಡಲು ಅವಕಾಶವಿರಲ್ಲಿಲ್ಲ. ಅದರೆ, ಮಸೂದೆ ತಿದ್ದುಪಡಿಯಿಂದ ಹಣವಂತರು ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶವಾಗಲಿದ್ದು, ಇದು ಭೂ ಕಬಳಿಕೆದಾರರಿಗೂ ವರದಾನವಾಗಲಿದೆ. ರೈತರು ಕೂಡ ಹಣದಾಸೆಗಾಗಿ ತಮ್ಮ ಜಮೀನನ್ನು ಕೈಗಾರಿಕೋದ್ಯಮಿಗಳು ಸೇರಿದಂತೆ ಶ್ರೀಮಂತರಿಗೆ ಮಾರಾಟ ಮಾಡುವುದರಿಂದ ಕೃಷಿ ಕ್ಷೇತ್ರ ವಿನಾಶದತ್ತ ಸಾಗುವ ಅಪಾಯವಿದೆ. ಸಣ್ಣ ರೈತಾಪಿಗಳ ಒಕ್ಕಲುತನವನ್ನು ರಕ್ಷಿಸುವ ಹಾಗೂ ಸಣ್ಣಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಧನವಂತರು, ಕೈಗಾರಿಕೋದ್ಯಮಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ನುಡಿದರು.
ಕೊಡಗಿನ ಜೀವವೈವಿಧ್ಯತೆ ಹಾಗೂ ಜಲಮೂಲಗಳನ್ನು ಸಂರಕ್ಷಿಸುವ ದಿಸೆಯಲ್ಲಿ ರಾಜ್ಯ ಸರಕಾರ ಕೊಡಗು ಜಿಲ್ಲೆಯನ್ನೂ ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದ ಅವರು, ರಾಜ್ಯದ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ಈ ಕಾಯ್ದೆಯನ್ನೇ ಕೈಬಿಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಕಾರ್ಯದರ್ಶಿ ಕಳ್ಳಿಚಂಡ ಧನು, ಖಜಾಂಚಿ ಚಂಗುಲಂಡ ರಾಜಪ್ಪ, ಸಂಚಾಲಕ ಬಾದುಮಂಡ ಮಹೇಶ್, ಸ್ಥಾಪಕ ಸದಸ್ಯ ಮಚ್ಚಮಾಡ ರಂಜು ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.