ಮಳೆಹಾನಿ ಪ್ರದೇಶಗಳಿಗೆ ಅನಂತ ಹೆಗಡೆ ಅಶೀಸರ ಭೇಟಿ

20/06/2020

ಮಡಿಕೇರಿ ಜೂ.20 : ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷÀ ಅನಂತ ಹೆಗಡೆ ಅಶೀಸರ ಅವರು ಶನಿವಾರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಉಂಟಾಗಿ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ಮದೆ, ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮಕ್ಕಂದೂರು, ಕಾಂಡನಕೊಲ್ಲಿಗೆ ಭೇಟಿ ನೀಡಿ 2018 ಮತ್ತು 2019 ರಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಭೂಕುಸಿತದ ಸ್ಥಳಗಳಿಗೆ ತಜ್ಞರ ತಂಡದೊಡನೆ ಭೇಟಿ ನೀಡಿ ಸ್ಥಳ ಪರಿಶೀಲನೆ ಕೈಗೊಂಡರು.
ಈ ಸಂದರ್ಭ ಸಂಬಂಧಪಟ್ಟ ಭೂ ವಿಜ್ಞಾನಿಗಳು, ಉಪ ವಿಭಾಗಾಧಿಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೈಗೊಂಡ ಪರಿಹಾರ ಕ್ರಮಗಳು ಮತ್ತು ಸದ್ಯದ ಪರಿಸ್ಥಿತಿಯ ಬಗ್ಗೆ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ಮಾಹಿತಿ ಪಡೆದರು.
ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶದ ನಿರ್ದೇಶಕರಾದ ಡಾ.ಶ್ರೀನಿವಾಸ್ ರೆಡ್ಡಿ, ಜಿಎಸ್‍ಐ ನಿರ್ದೇಶಕರಾದ ಮಾರುತಿ ಕೆ.ಇ., ಸಿಸಿಎಫ್ ಹೀರಾಲಾಲ್, ಡಿಸಿಎಫ್ ಪ್ರಭಾಕರನ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭಾರತೀಯ ವಿಜ್ಞಾನ ಅಧ್ಯಯನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ಎಸಿಎಫ್ ನೀಲೇಶ್ ಶಿಂಧೆ, ದಯಾನಂದ್, ಆರ್‍ಎಫ್‍ಒ ಸುಮಿತ್ರ, ಹಿರಿಯ ಭೂ ವಿಜ್ಞಾನಿ ರೇಷ್ಮ ಇತರರು ಹಾಜರಿದ್ದರು.